March 4, 2026
Wednesday, March 4, 2026
spot_img

ಮುಂಡಗೋಡಿನಲ್ಲಿ ಟಿಬೆಟಿಯನ್ ಹೊಸ ವರುಷದ ಸಂಭ್ರಮ: ವಿಧ್ಯುಕ್ತವಾಗಿ ಸಂಪನ್ನಗೊಂಡ ‘ಲೋಸಾರ್’ ಹಬ್ಬ!

ಹೊಸದಿಗಂತ ಮುಂಡಗೋಡು:

ಟಿಬೆಟಿಯನ್ನರ ಹೊಸ ವರ್ಷವಾದ ‘ಲೋಸಾರ್’ ಹಬ್ಬದ ಸಡಗರವು ಬುಧವಾರ ಶಾಸ್ತ್ರೋಕ್ತವಾಗಿ ನೆರವೇರಿದ ‘ಭೂತ ದಹನ’ ಕಾರ್ಯಕ್ರಮದೊಂದಿಗೆ ಮುಕ್ತಾಯಗೊಂಡಿತು. ತಾಲೂಕಿನ ಟಿಬೆಟಿಯನ್ ಕ್ಯಾಂಪ್ ನಂ. 1ರ ಬೌದ್ಧ ಮಂದಿರದಲ್ಲಿ ನಡೆದ ಈ ಧಾರ್ಮಿಕ ಆಚರಣೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಸಂಭ್ರಮಿಸಿದರು.

ಹಬ್ಬದ ಕೊನೆಯ ದಿನವಾದ ಬುಧವಾರ ಬೆಳಗ್ಗೆಯಿಂದಲೇ ಬೌದ್ಧ ಮಂದಿರದಲ್ಲಿ ಪೂಜಾ ಕಾರ್ಯಕ್ರಮಗಳು ಆರಂಭವಾದವು. ಹಿರಿಯ ಬೌದ್ಧ ಸನ್ಯಾಸಿಗಳ ನೇತೃತ್ವದಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಸಾಂಪ್ರದಾಯಿಕ ಉಡುಪು ಧರಿಸಿದ ಸನ್ಯಾಸಿಗಳು ವಿವಿಧ ವಾದ್ಯಗೋಷ್ಠಿಗಳೊಂದಿಗೆ ವಿಶೇಷವಾಗಿ ಸಿದ್ಧಪಡಿಸಿದ ಮೂರ್ತಿಯ ಮೆರವಣಿಗೆ ನಡೆಸಿದರು.

ಮೆರವಣಿಗೆಯ ಅಂತ್ಯದಲ್ಲಿ ನಿಗದಿಪಡಿಸಿದ ಸ್ಥಳದಲ್ಲಿ ಗುಡಿಸಿಲಿನ ಆಕಾರದ ವೇದಿಕೆಯನ್ನು ಸಿದ್ಧಪಡಿಸಲಾಗಿತ್ತು. ಕೆಡುಕಿನ ಸಂಕೇತವಾದ ಭೂತವನ್ನು ದಹಿಸುವ ಮುನ್ನ ಟಿಬೆಟಿಯನ್ನರು ತಾವು ತಯಾರಿಸಿದ ವಿವಿಧ ಧವಸ ಧಾನ್ಯಗಳ ಪದಾರ್ಥಗಳು ಮತ್ತು ಬಿಳಿ ವಸ್ತ್ರವನ್ನು ಅರ್ಪಿಸಿದರು. ತದನಂತರ ಬೌದ್ಧ ಸನ್ಯಾಸಿಗಳು ಮೂರ್ತಿಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಈ ವರ್ಷದ ಸಂಕಷ್ಟಗಳು ದೂರವಾಗಲಿ ಎಂದು ಪ್ರಾರ್ಥಿಸಿದರು.

ಹಲವು ವರ್ಷಗಳ ಹಿಂದೆ ಭೂತ ದಹನದ ವೇಳೆ ಭಾರತೀಯ ಕರೆನ್ಸಿ ನೋಟು ಮತ್ತು ನಾಣ್ಯಗಳನ್ನು ಸುಡಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳೀಯ ಪೊಲೀಸರು ಮತ್ತು ಟಿಬೆಟಿಯನ್ ಮುಖಂಡರು ದಹನ ಕ್ರಿಯೆ ನಡೆಯುವ ಸ್ಥಳದಲ್ಲಿ ಹಾಜರಿದ್ದು, ಅಗ್ನಿಗೆ ಹಾಕುವ ವಸ್ತುಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು.

ಈ ಬಾರಿಯ ಲೋಸಾರ್ ಹಬ್ಬವು ಟಿಬೆಟಿಯನ್ನರಿಗೆ ಅತ್ಯಂತ ವಿಶೇಷವಾಗಿತ್ತು. ಧರ್ಮಗುರು ದಲೈಲಾಮಾ ಅವರು ಕಳೆದ 45 ದಿನಗಳ ಕಾಲ ಮುಂಡಗೋಡಿನಲ್ಲೇ ತಂಗಿದ್ದು, ಫೆಬ್ರವರಿ 9ರಂದು ಧರ್ಮಶಾಲಾಕ್ಕೆ ತೆರಳಿದ್ದರು. ಅವರ ಉಪಸ್ಥಿತಿಯಿಂದಾಗಿ ಇಡೀ ಕಾಲೋನಿಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು, ಇದು ಈ ವರ್ಷದ ಆಚರಣೆಯ ಮೆರುಗನ್ನು ಮತ್ತಷ್ಟು ಹೆಚ್ಚಿಸಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !