ಹೊಸದಿಗಂತ ಕಲಬುರಗಿ:
ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಟಿಎಫ್ ಡಬ್ಲ್ಯೂ 35 ಮಹಿಳಾ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತೀಯ ಆಟಗಾರ್ತಿಯರ ವಿಜಯಯಾತ್ರೆ ಮುಂದುವರಿದಿದೆ. ಬುಧವಾರ ನಡೆದ ರೋಚಕ ಪಂದ್ಯಗಳಲ್ಲಿ ಭಾರತದ ಜೀಲ್ ದೇಸಾಯಿ ಮತ್ತು ಅಂಕಿತಾ ರೈನಾ ಭರ್ಜರಿ ಜಯ ದಾಖಲಿಸುವ ಮೂಲಕ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.
5ನೇ ಶ್ರೇಯಾಂಕಿತ ಜೀಲ್ ದೇಸಾಯಿ ಅವರು ಜೆನ್ನಿಫರ್ ಲ್ಯೂಖೇಮಿ ವಿರುದ್ಧ 6-2, 6-1 ಅಂತರದ ನೇರ ಸೆಟ್‌ಗಳಿಂದ ಸುಲಭ ಜಯ ಸಾಧಿಸಿದರು.
ಅನುಭವಿ ಆಟಗಾರ್ತಿ ಅಂಕಿತಾ ರೈನಾ (8ನೇ ಶ್ರೇಯಾಂಕ) ಅವರು ಭಾರತದವರೇ ಆದ ಸೋನಲ್ ಪಾಟೀಲ್ ವಿರುದ್ಧ 6-1, 6-3 ಅಂತರದಲ್ಲಿ ಜಯಗಳಿಸಿ ಮುನ್ನಡೆದರು.
ಈಗಾಗಲೇ ಎರಡನೇ ಸುತ್ತಿಗೆ ಆಯ್ಕೆಯಾಗಿರುವ 3ನೇ ಶ್ರೇಯಾಂಕಿತ ವೈಷ್ಣವಿ ಅಡ್ಕರ್ ಅವರೊಂದಿಗೆ ಈಗ ಜೀಲ್ ಮತ್ತು ಅಂಕಿತಾ ಸೇರಿಕೊಂಡಿದ್ದಾರೆ.
ಅಂತರಾಷ್ಟ್ರೀಯ ಆಟಗಾರ್ತಿಯರ ಅಬ್ಬರದ ಮುಂದೆ ಕೆಲವು ಭಾರತೀಯ ಆಟಗಾರ್ತಿಯರು ಸೋಲೊಪ್ಪಿಕೊಂಡರು:
ಜಾಸ್ಮಿನ್ ಗಿಂಬ್ರೇರೆ ಅವರು ಐಶ್ವರ್ಯಾ ಜಾಧವ್ ವಿರುದ್ಧ (6-2, 6-1) ಗೆದ್ದರು.
ಥಾಸಾಪಾರ್ನ್ ನಾಕ್ಲೋ ಅವರು ವಾಲೇರಿಯಾ ವಿರುದ್ಧ (6-3, 6-2) ಜಯ ದಾಖಲಿಸಿದರು.
ಪೋಲಿನಾ ಕೆ ಅವರು ಆಕಾಂಕ್ಷಾ ದಿಲೀಪ್ ವಿರುದ್ಧ (6-2, 6-1) ಜಯಗಳಿಸಿದರು.
ಇವಾ ಮಾರಿ ಅವರು ಸೋಹಾ ಸಾಧಿಕ್ ವಿರುದ್ಧ (7-5, 6-0) ಜಯ ಸಾಧಿಸಿದರು.
ಶ್ರೀವಲ್ಲಿ ರಶ್ಮಿಕಾ ಅವರು ಇವಗೇನಿಯಾ ಬೂರಡಿನಾ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡು (5-1) ಪಂದ್ಯದಿಂದ ಹಿಂದೆ ಸರಿದರು.
ಡಬಲ್ಸ್ ವಿಭಾಗದಲ್ಲಿ ಭಾರತೀಯ ಆಟಗಾರ್ತಿಯರು ಉತ್ತಮ ಪ್ರದರ್ಶನ ನೀಡಿದರು. ಶ್ರವ್ಯಾ ಶಿವಾನಿ ಚಿಲಕಲಾಪುಡಿ ಮತ್ತು ಮಿಚಿಕಾ ವೋಜೆಕಿ ಜೋಡಿಯು ಲಾರೋನ್ ಮತ್ತು ಮಿಖೈಲೋವಾ ಜೋಡಿಯನ್ನು 6-2, 6-3 ರಿಂದ ಮಣಿಸಿತು.
ಸಿಂಗಲ್ಸ್‌ನಲ್ಲಿ ಮಿಂಚಿದ ಜೀಲ್ ದೇಸಾಯಿ, ಯಲೀನಾ ನೆಪ್ಲೀ ಅವರೊಂದಿಗೆ ಸೇರಿ ಡಬಲ್ಸ್‌ನಲ್ಲಿ ಸೇದ್ಯಾಶೇವ್ ಮತ್ತು ಸಸ್ಲೋವಾ ಜೋಡಿಯನ್ನು 6-3, 6-4 ಅಂತರದಲ್ಲಿ ಸೋಲಿಸಿದರು.



