ಹೊಸದಿಗಂತ ವರದಿ ಬಳ್ಳಾರಿ:
ಇಸ್ರೇಲ್, ಇರಾನ್ ಮಧ್ಯೆ ನಡೆಯುತ್ತಿರುವ ವೈಮಾನಿಕ ದಾಳಿ ಹಿನ್ನೆಲೆಯಲ್ಲಿ ದುಬೈನಲ್ಲಿ ಸಿಲುಕಿದ್ದ ಬಳ್ಳಾರಿಯ 33ಜನರು ಸುರಕ್ಷಿತವಾಗಿ ಗುರುವಾರ ಬೆಂಗಳೂರಿಗೆ ಬಂದಿಳಿದಿದ್ದಾರೆ.
ಬಳ್ಳಾರಿ ಗ್ರಾಮೀಣ ಶಾಸಕ, ಮಾಜಿ ಸಚಿವ ಬಿ.ನಾಗೇಂದ್ರ ಅವರು, ಎಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸಿದರು. ಈ ವೇಳೆ ಬಳ್ಳಾರಿ ಜಿಲ್ಲಾಡಳಿತದ ವತಿಯಿಂದ ಹೂ ನೀಡಿ ಎಲ್ಲರನ್ನೂ ಬರಮಾಡಿಕೊಂಡರು. ಪ್ರವಾಸಕ್ಕೆಂದು ದುಬೈಗೆ ತೆರಳಿದ ಬಳ್ಳಾರಿಯ ಈ ತಂಡ, ವಾಪಸ್ಸು ಭಾರತಕ್ಕೆ ಮರಳುವ ವೇಳೆ, ಇಸ್ರೇಲ್, ಇರಾನ್ ವೈಮಾನಿಕ ದಾಳಿಗೆ ಮುಂದಾಗಿದ್ದವು. ಏರ್ ಸ್ಟ್ರೈಕ್ ನಿಂದ ಅವರೆಲ್ಲರ ಪ್ರಯಾಣ ರದ್ದಾಗಿತ್ತು. ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಅವರ ಕುಟುಂಬದ ಸದಸ್ಯರು ದುಬೈನಲ್ಲೇ ಸಿಲುಕಿಕೊಂಡಿದ್ದರು.
ಅವರು ಮಂಗಳವಾರ ಭಾರತಕ್ಕೆ ಸುರಕ್ಷಿತವಾಗಿ ಮರಳಿದ್ದಾರೆ. ದುಬೈನಿಂದ ನೇರವಾಗಿ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಪಸ್ಸು ಬಂದಿಳಿಯುತ್ತಿದ್ದಂತೆಯೇ, ಕಾದು ಕುಳಿತಿದ್ದ ಕುಟುಂಬದ ಸದಸ್ಯರಲ್ಲಿ ಸಂತಸ, ಸಂಭ್ರಮ ಮನೆ ಮಾಡಿತ್ತು.



