October 18, 2026
Sunday, October 18, 2026
spot_img

ಮಂಡ್ಯದ ಜೀವನಾಡಿ KRSಗೆ 6 ತಿಂಗಳ ಬಳಿಕ ನೀರಿನ ಆಸರೆ: ಸದ್ಯದ ನೀರಿನ ಮಟ್ಟ ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಪ್ರಸಿದ್ಧ ಕೃಷ್ಣರಾಜಸಾಗರ (KRS) ಜಲಾಶಯಕ್ಕೆ ಬರೋಬ್ಬರಿ ಅರ್ಧ ವರ್ಷದ ಕಾಯುವಿಕೆಯ ನಂತರ ಅಲ್ಪ ಪ್ರಮಾಣದ ಒಳಹರಿವು ಆರಂಭವಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಸಾಧಾರಣ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ಡ್ಯಾಂಗೆ ನೀರಿನ ಆವಕ ಸಲ್ಪ ಮಟ್ಟಿಗೆ ಚೇತರಿಸಿಕೊಂಡಿದೆ. ಪ್ರಸ್ತುತ ಜಲಾಶಯಕ್ಕೆ 1,449 ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಕೃಷಿ ಹಾಗೂ ಕುಡಿಯುವ ಉದ್ದೇಶಕ್ಕಾಗಿ 760 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಇಂದಿನ ನೀರಿನ ಮಟ್ಟ ಮತ್ತು ಸಾಮರ್ಥ್ಯ

ಗರಿಷ್ಠ 124.80 ಅಡಿ ಸಾಮರ್ಥ್ಯ ಹೊಂದಿರುವ ಈ ಜಲಾಶಯದಲ್ಲಿ ಪ್ರಸ್ತುತ ನೀರಿನ ಮಟ್ಟ ಕೇವಲ 80.90 ಅಡಿಗಳಿಗೆ ತಲುಪಿದೆ. ಒಟ್ಟು 49.452 ಟಿಎಂಸಿ ಸಂಗ್ರಹ ಸಾಮರ್ಥ್ಯದ ಪೈಕಿ ಸದ್ಯ ಡ್ಯಾಂನಲ್ಲಿರುವುದು ಕೇವಲ 11.188 ಟಿಎಂಸಿ ನೀರು ಮಾತ್ರ. ಇದರಲ್ಲಿ ಬಳಕೆ ಮಾಡಲು ಅಸಾಧ್ಯವಾದ 5 ಟಿಎಂಸಿ ಡೆಡ್ ಸ್ಟೋರೇಜ್ ಕೂಡ ಸೇರಿದೆ ಎಂಬುದು ಗಮನಾರ್ಹ.

ಕಳೆದ ವರ್ಷಕ್ಕೆ ಹೋಲಿಸಿದರೆ ತೀವ್ರ ಆತಂಕ

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಹಳೆ ಮೈಸೂರು ಭಾಗದಲ್ಲಿ ಈ ಬಾರಿ ಭೀಕರ ಬರಗಾಲದ ಮುನ್ಸೂಚನೆ ಕಾಣಿಸುತ್ತಿದೆ. ಕಳೆದ ವರ್ಷ ಇದೇ ದಿನದಂದು ಜಲಾಶಯಕ್ಕೆ ಬರೋಬ್ಬರಿ 25,757 ಕ್ಯೂಸೆಕ್ ಒಳಹರಿವಿತ್ತು. ಡ್ಯಾಂ ಸಂಪೂರ್ಣ ಭರ್ತಿಯಾಗಿದ್ದರಿಂದ 40 ಸಾವಿರ ಕ್ಯೂಸೆಕ್‌ಗಿಂತಲೂ ಹೆಚ್ಚು ನೀರನ್ನು ನದಿಗೆ ಬಿಡಲಾಗಿತ್ತು. ಆದರೆ ಈ ವರ್ಷ ಮುಂಗಾರು ಮಳೆ ಕೈಕೊಟ್ಟಿರುವ ಕಾರಣ ಜಲಾನಯನ ಪ್ರದೇಶದಲ್ಲಿ ಆತಂಕದ ನೆರಳು ಆವರಿಸಿದೆ.

Must Read