ಹೊಸದಿಗಂತ ಚಿತ್ರದುರ್ಗ:
ಒಳ ಮೀಸಲಾತಿಯನ್ನು ತಕ್ಷಣವೇ ಜಾರಿಗೊಳಿಸಬೇಕು ಹಾಗೂ ಅದರ ಅನ್ವಯ ೫೬,೪೩೨ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿ ಮಾದಿಗ ಸಮುದಾಯದ ಕಾರ್ಯಕರ್ತರು ಗುರುವಾರ ಚಿತ್ರದುರ್ಗದ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು, ಒನಕೆ ಓಬವ್ವ ವೃತ್ತದ ಮೂಲಕ ಸಾಗಿ ಕಾಂಗ್ರೆಸ್ ಕಚೇರಿಗೆ ಧಾವಿಸಿದರು. ಈ ವೇಳೆ ಸರ್ಕಾರದ ವಿಳಂಬ ನೀತಿಯನ್ನು ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ನಾಯಕರ ಭಾವಚಿತ್ರಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಕಚೇರಿಗೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದಾಗ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ನಿಯೋಗವು ಅಪರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಒಳ ಮೀಸಲಾತಿಗಾಗಿ ಮೂರೂವರೆ ದಶಕಗಳಿಂದ ಹೋರಾಡುತ್ತಿದ್ದರೂ ಸರ್ಕಾರಗಳು ಕೇವಲ ಭರವಸೆ ನೀಡುತ್ತಾ ಕಾಲಹರಣ ಮಾಡುತ್ತಿವೆ ಎಂದು ಪ್ರತಿಭಟನಾಕಾರರು ದೂರಿದರು.
ಒಳ ಮೀಸಲಾತಿ ನೀಡುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದ್ದರೂ, ರಾಜ್ಯ ಸರ್ಕಾರ ಜಾರಿಗೊಳಿಸಲು ಹಿಂಜರಿಯುತ್ತಿರುವುದು ಮಾದಿಗ ಸಮುದಾಯಕ್ಕೆ ಮಾಡುತ್ತಿರುವ ಅನ್ಯಾಯ ಎಂದು ಕಿಡಿಕಾರಿದರು.
ಎ.ಜೆ. ಸದಾಶಿವ ಆಯೋಗ, ಮಾಧುಸ್ವಾಮಿ ನೇತೃತ್ವದ ಸಮಿತಿ ಹಾಗೂ ನಾಗಮೋಹನ್ ದಾಸ್ ವರದಿಗಳ ಜಾರಿಗೆ ಕೆಲ ಸಮುದಾಯಗಳು ಅಡ್ಡಿಪಡಿಸುತ್ತಿವೆ ಎಂದು ಆರೋಪಿಸಲಾಯಿತು.
ವಿವಿಗಳಲ್ಲಿ ವಿಷಯವಾರು ನೇಮಕಾತಿ ಬದಲು ಇಡೀ ವಿಶ್ವವಿದ್ಯಾಲಯವನ್ನೇ ಒಂದು ಘಟಕವಾಗಿ ಪರಿಗಣಿಸುತ್ತಿರುವುದು ಸಮುದಾಯದ ಅಭ್ಯರ್ಥಿಗಳಿಗೆ ಹಿನ್ನಡೆಯಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಪ್ರತಿಭಟನೆಯಲ್ಲಿ ಸಚಿವರುಗಳಾದ ಡಾ. ಜಿ. ಪರಮೇಶ್ವರ್, ಹೆಚ್.ಸಿ. ಮಹದೇವಪ್ಪ, ಡಿ. ಸುಧಾಕರ್ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಸಮುದಾಯದ ಹಿತರಕ್ಷಣೆಯಲ್ಲಿ ನಾಯಕರು ವಿಫಲರಾಗಿದ್ದಾರೆ ಎಂದು ಹರಿಹಾಯ್ದರು.
ಈ ಹೋರಾಟದಲ್ಲಿ ಮುಖಂಡರಾದ ನೇತ್ರಾನಂದ ಕೆ.ಎಸ್., ಕಿರಣ್‌ಕುಮಾರ್, ಜಗದೀಶ್, ಮಾರುತಿ, ಹುಲ್ಲೂರು ಕುಮಾರ್, ಕೋಟಿ ಅಳಗವಾಡಿ ಸೇರಿದಂತೆ ಹಲವಾರು ಪ್ರಮುಖರು ಭಾಗವಹಿಸಿದ್ದರು.



