ಹೊಸದಿಗಂತ ಹಾವೇರಿ:
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ರಾಜ್ಯ ಬಜೆಟ್ ಯಾವುದೇ ದೂರದೃಷ್ಟಿ ಇಲ್ಲದ, ಅಭಿವೃದ್ಧಿ ಕುಂಠಿತಗೊಳಿಸುವ ‘ಕಳಪೆ ಬಜೆಟ್’ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತೀವ್ರವಾಗಿ ಟೀಕಿಸಿದ್ದಾರೆ. ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಜೆಟ್‌ನಿಂದ ರಾಜ್ಯದ ಆರ್ಥಿಕ ಪರಿಸ್ಥಿತಿಯ ಮೇಲೆ ಗಂಭೀರವಾದ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದರು.
ಬೊಮ್ಮಾಯಿ ಅವರ ಪ್ರಕಾರ, ಈ ಬಾರಿಯ ಬಜೆಟ್ ರಾಜ್ಯವನ್ನು ಸಾಲದ ಸುಳಿಗೆ ದೂಡುತ್ತಿದೆ. “ಸುಮಾರು 1.32 ಲಕ್ಷ ಕೋಟಿ ರೂ. ಸಾಲ ಮಾಡಲಾಗಿದ್ದು, 25 ಸಾವಿರ ಕೋಟಿ ರೂ.ಗಳಿಗೂ ಅಧಿಕ ಹೊಸ ತೆರಿಗೆ ಹೇರಲಾಗಿದೆ. ಅಲ್ಲದೆ 32 ಸಾವಿರ ಕೋಟಿ ರೂ.ಗಳ ಕೊರತೆ ಬಜೆಟ್ ಇದಾಗಿದೆ. ಇದು ರಾಜ್ಯದ ಪ್ರಗತಿಯನ್ನು 10-15 ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ಯುತ್ತದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. 17 ಬಾರಿ ಬಜೆಟ್ ಮಂಡಿಸಿದ ಅನುಭವವಿರುವ ಸಿದ್ದರಾಮಯ್ಯ ಅವರಿಂದ ಇಂತಹ ನಿರಾಶಾದಾಯಕ ಬಜೆಟ್ ನಿರೀಕ್ಷಿಸಿರಲಿಲ್ಲ ಎಂದು ಅವರು ಕುಟುಕಿದರು.
ಪ್ರಮುಖವಾಗಿ ನೀರಾವರಿ ಕ್ಷೇತ್ರಕ್ಕೆ ಕೇವಲ 22 ಸಾವಿರ ಕೋಟಿ ರೂ. ಮೀಸಲಿಟ್ಟಿರುವುದನ್ನು ಬೊಮ್ಮಾಯಿ ಪ್ರಶ್ನಿಸಿದರು. “ಕೃಷ್ಣಾ ಮೇಲ್ದಂಡೆ ಯೋಜನೆಗೆ ಕನಿಷ್ಠ 25 ಸಾವಿರ ಕೋಟಿ ರೂ. ಅಗತ್ಯವಿತ್ತು, ಆದರೆ ಸರ್ಕಾರ ಸೂಕ್ತ ಅನುದಾನ ನೀಡಿಲ್ಲ. ಆರೋಗ್ಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳಿಗೂ ಹಣದ ಕೊರತೆಯಿದೆ” ಎಂದು ಅವರು ದೂರಿದರು.
ಒಳ ಮೀಸಲಾತಿ ವಿಚಾರದಲ್ಲಿ ಸರ್ಕಾರ ದಲಿತ ಸಮಾಜಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಕಿಡಿಕಾರಿದ ಅವರು, ಸಚಿವರ ನಡುವಿನ ಗೊಂದಲದಿಂದಾಗಿ ಪ್ರಕ್ರಿಯೆ ಕುಂಠಿತಗೊಂಡಿದೆ ಎಂದರು. “ಬೆಳಗಾವಿ ಅಧಿವೇಶನದಲ್ಲಿ ಕಾನೂನು ರೂಪಿಸಿ, ರಾಜ್ಯಪಾಲರ ಅಂಕಿತ ಪಡೆದರೂ ಈಗ ಜಾರಿಗೊಳಿಸಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ನ್ಯಾಯಾಲಯದ ನೆಪವೊಡ್ಡಿ ವಿಳಂಬ ಮಾಡಲಾಗುತ್ತಿದೆ. ಸರ್ಕಾರ ತಕ್ಷಣವೇ ಒಳ ಮೀಸಲಾತಿ ಜಾರಿಗೊಳಿಸದಿದ್ದರೆ ಬಿಜೆಪಿ ವತಿಯಿಂದ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ಬೊಮ್ಮಾಯಿ ಎಚ್ಚರಿಕೆ ನೀಡಿದರು.



