May 28, 2026
Thursday, May 28, 2026
spot_img

ದೂರದೃಷ್ಟಿಯಿಲ್ಲದ ನೀರಸ ಆಯವ್ಯಯ ಪತ್ರ: ರಾಜ್ಯ ಬಜೆಟ್‌ಗೆ ವಿಜಯೇಂದ್ರ ಟೀಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸರ್ಕಾರ ಮಂಡಿಸಿದ 2025-26ನೇ ಸಾಲಿನ ಬಜೆಟ್ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಈ ಆಯವ್ಯಯ ಪತ್ರ ಜನರ ನಿರೀಕ್ಷೆಗಳನ್ನು ಪೂರೈಸದ ನೀರಸ ಬಜೆಟ್ ಎಂದು ಅವರು ಟೀಕಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಿಜಯೇಂದ್ರ, ಸಿದ್ದರಾಮಯ್ಯ ಅವರಿಗೆ 17ನೇ ಬಜೆಟ್ ಮಂಡಿಸುವ ಅವಕಾಶ ಸಿಕ್ಕಿದ್ದರೂ ಅದು ಜನಪರವಾಗಿಲ್ಲ ಎಂದು ಹೇಳಿದರು. ಬಜೆಟ್ ಓದುವಾಗ ಆಡಳಿತ ಪಕ್ಷದ ಶಾಸಕರಲ್ಲಿಯೂ ಆಸಕ್ತಿ ಕಾಣಿಸಲಿಲ್ಲ ಎಂದು ಅವರು ಟೀಕಿಸಿದರು. ಬಜೆಟ್ ಕೇಳಲು ಚೆನ್ನಾಗಿದ್ದರೂ ಜನರಿಗೆ ಪ್ರಯೋಜನವಾಗುವ ಯಾವುದೇ ಮಹತ್ವದ ಯೋಜನೆಗಳಿಲ್ಲ ಎಂದು ಅಭಿಪ್ರಾಯಪಟ್ಟರು.

ರಾಜ್ಯದ ಸಾಲದ ಭಾರವೂ ಹೆಚ್ಚುತ್ತಿರುವುದಾಗಿ ವಿಜಯೇಂದ್ರ ಹೇಳಿದರು. ಕಳೆದ ಬಜೆಟ್‌ನಲ್ಲಿ 1.16 ಲಕ್ಷ ಕೋಟಿ ರೂ. ಸಾಲ ಮಾಡಲಾಗಿದ್ದರೆ, ಈ ಬಾರಿ 2025-26ನೇ ಸಾಲಿಗೆ 1.32 ಲಕ್ಷ ಕೋಟಿ ರೂ. ಸಾಲ ಮಾಡುವ ಯೋಜನೆ ಇದೆ. ಕಳೆದ ಮೂರು ವರ್ಷಗಳಲ್ಲಿ ಒಟ್ಟು 4.39 ಲಕ್ಷ ಕೋಟಿ ರೂ. ಸಾಲ ಮಾಡಿರುವುದು ಸರ್ಕಾರದ ದಾಖಲೆಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ:

ಶಿಕ್ಷಣ ಕ್ಷೇತ್ರಕ್ಕೆ ಹಿಂದಿನ ವರ್ಷಕ್ಕಿಂತ ಕಡಿಮೆ ಅನುದಾನ ನೀಡಲಾಗಿದೆ ಎಂದು ಅವರು ಆರೋಪಿಸಿದರು. ರೈತರು, ಯುವಜನತೆ ಹಾಗೂ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದ ಯಾವುದೇ ಸ್ಪಷ್ಟ ಯೋಜನೆ ಇಲ್ಲ ಎಂದು ಹೇಳಿದರು. ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಸಂಗ್ರಹಿಸಲು ಅಬಕಾರಿ ಆದಾಯದ ಮೇಲೆ ಅವಲಂಬಿತವಾಗಿದೆ ಎಂದು ಆರೋಪಿಸಿದರು.

ಇದೇ ವೇಳೆ ಆರೋಗ್ಯ, ನೀರಾವರಿ, ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗದ ಅಭಿವೃದ್ಧಿಗೆ ಸೂಕ್ತ ಆದ್ಯತೆ ನೀಡಲಾಗಿಲ್ಲ ಎಂದು ವಿಜಯೇಂದ್ರ ಆಕ್ಷೇಪಿಸಿದರು. ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಈ ಬಜೆಟ್ ರೂಪಿಸಲಾಗಿಲ್ಲ ಎಂದು ಅವರು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !