March 7, 2026
Saturday, March 7, 2026
spot_img

ಬಜೆಟ್ ನ ಸಿಂಹಪಾಲು ಕೇವಲ ಒಂದು ವರ್ಗದ ಅಭಿವೃದ್ಧಿಗೆ ಮೀಸಲಾಗಿದೆ: ಅರವಿಂದ ಬೆಲ್ಲದ್ ಆರೋಪ

ಹೊಸದಿಗಂತ ವರದಿ ​ಹುಬ್ಬಳ್ಳಿ:

ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟು, ಅಭಿವೃದ್ಧಿ ಕುಂಠಿತವಾಗಿರುವ ಸಂದರ್ಭದಲ್ಲಿ ಸಿದ್ದರಾಮಯ್ಯ ಸರ್ಕಾರ, ಕನ್ನಡಿಗರ ತೆರಿಗೆ ಹಣವನ್ನು ಕೇವಲ ಒಂದು ನಿರ್ದಿಷ್ಟ ಸಮುದಾಯದ ಓಲೈಕೆಗಾಗಿ ಸುರಿಯುವ ಮೂಲಕ ರಾಜ್ಯಕ್ಕೆ ದ್ರೋಹ ಬಗೆಯುತ್ತಿದೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಹಾಗೂ ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ್ದು ಪ್ರಸಕ್ತ ಸಾಲಿನ ಆಯವ್ಯಯವಲ್ಲ. ಸಂಪೂರ್ಣ ವೋಟ್ ಬ್ಯಾಂಕ್ ರಾಜಕಾರಣದ ಕರಡು ಎಂಬಂತೆ ಭಾಸವಾಗುತ್ತದೆ. ರಾಜ್ಯದ ಬಹುಸಂಖ್ಯಾತ ಜನತೆ ತೆರಿಗೆ ಪಾವತಿಸುತ್ತಿದ್ದರೆ, ಅದರ ಸಿಂಹಪಾಲನ್ನು ಕೇವಲ ಒಂದು ವರ್ಗದ ಅಭಿವೃದ್ಧಿಗೆ ಮೀಸಲಿಡುತ್ತಿರುವುದು ನಾಡಿನ ದೌರ್ಭಾಗ್ಯ. ಕೆಪಿಎಸ್ ಮಾದರಿಯಲ್ಲಿ ಅಲ್ಪಸಂಖ್ಯಾತ ಶಾಲೆಗಳ ಅಭಿವೃದ್ಧಿ, ಹೊಸ ವಸತಿ ಶಾಲೆಗಳು, ಹಜ್ ಭವನಗಳ ನಿರ್ಮಾಣ ಮತ್ತು ವಕ್ಪ್ ಆಸ್ತಿಗಳ ಅಭಿವೃದ್ಧಿಗೆ ಭಾರಿ ಅನುದಾನ ನೀಡಿರುವುದು ಸರ್ಕಾರದ ತುಷ್ಟೀಕರಣದ ನೀತಿ ತೋರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಅಲ್ಪಸಂಖ್ಯಾತರ ಓಲೈಕೆಗಾಗಿ ಅಲ್ಪಸಂಖ್ಯಾತರ ಬಡಾವಣೆಗಳ ಮೂಲಸೌಕರ್ಯ ಅಭಿವೃದ್ಧಿಗೆ ನೂರಾರು ಕೋಟಿ ರೂ., ಅಲ್ಪಸಂಖ್ಯಾತ ಅನಾಥರಿಗಾಗಿ ಹೊಸ ವೃದ್ಧಾಶ್ರಮ, ನಿರುದ್ಯೋಗಿ ಅಲ್ಪಸಂಖ್ಯಾತರಿಗೆ ಉದ್ಯೋಗಕ್ಕಾಗಿ 3 ಲಕ್ಷದವರೆಗೆ ಆರ್ಥಿಕ ನೆರವು, ಹಜ್ ಭವನಗಳ ನಿರ್ಮಾಣ ಹೀಗೆ ಆ ಸಮುದಾಯದ ಓಲೈಕೆಗೆ ಹಲವು ಘೋಷಣೆಗಳನ್ನು ಮಾಡುವ ಮೂಲಕ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿರುವುದು ಸ್ಪಷ್ಟವಾಗಿದೆ.

ಈಗಾಗಲೇ 8.24 ಲಕ್ಷ ಕೋಟಿ ರೂ. ಸಾಲದ ಹೊರೆಯಲ್ಲಿರುವ ರಾಜ್ಯ ಸರ್ಕಾರ, ಸಾಲದ ಬಡ್ಡಿ ಮನ್ನಾ ಮತ್ತು ಉಚಿತ ಸೌಲಭ್ಯಗಳ ಹೆಸರಿನಲ್ಲಿ ಬೊಕ್ಕಸ ಖಾಲಿ ಮಾಡುವುದು ಮುಂದಿನ ಪೀಳಿಗೆಗೆ ಮಾಡುವ ಅನ್ಯಾಯ ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !