ಹೊಸದಿಗಂತ ವರದಿ ಅಂಕೋಲಾ:
ಲಾರಿಯಲ್ಲಿ ಹಿಂಸಾತ್ಮಕ ರೀತಿಯಲ್ಲಿ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಸುಮಾರು 12 ಲಕ್ಷ ಮೌಲ್ಯದ ಎಮ್ಮೆಗಳನ್ನು ಅಂಕೋಲಾ ಪೊಲೀಸರು ರಾಷ್ಟ್ರೀಯ ಹೆದ್ದಾರಿ 52 ಹೆಬ್ಬುಳ ಬಳಿ ವಶಕ್ಕೆ ಪಡೆದುಕೊಂಡು ಇಬ್ಬರನ್ನು ಬಂಧಿಸಿದ್ದಾರೆ.
ಲಾರಿ ಚಾಲಕ ಹರಿಯಾಣದ ಬುಲಷಣ ಶ್ರೀರಾಮ ಸ್ವರೂಪ್(46) ಮತ್ತು ಜಾನುವಾರು ಸಾಗಿಸುತ್ತಿದ್ದ ರಾಮಕುಮಾರ ಜಾಧವ(55) ಬಂಧಿತ ಆರೋಪಿಗಳಾಗಿದ್ದು ಇವರಿಂದ 11.42 ಲಕ್ಷ ಮೌಲ್ಯದ ಕಪ್ಪು ಮುರಾ ಜಾತಿಯ 6 ಎಮ್ಮೆಗಳು ಮತ್ತು 29ಸಾವಿರ ಮೌಲ್ಯದ ಕಪ್ಪು ಮುರಾ ಜಾತಿಯ 5 ಎಮ್ಮೆ ಕರುಗಳು ಮತ್ತು 9ಲಕ್ಷ ಮೌಲ್ಯದ ಟಾಟಾ ಕಂಪನಿಯ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ:
ಆರೋಪಿತರು ಎಚ್.ಆರ್39 ಸಿ4024 ನೋಂದಣಿ ಸಂಖ್ಯೆಯ ಲಾರಿಯಲ್ಲಿ ಹರಿಯಾಣ ರಾಜ್ಯದಿಂದ ಮಂಗಳೂರಿಗೆ ಯಾವುದೇ ಪರವಾನಗಿ ಇಲ್ಲದೇ ವಧೆಯ ಉದ್ದೇಶದಿಂದ ಹಗ್ಗದಿಂದ ಗಟ್ಟಿಯಾಗಿ ಕಟ್ಟಿ ನೀರು ಆಹಾರ ನೀಡದೇ ನಿಂತುಕೊಳ್ಳಲು ಸರಿಯಾದ ವ್ಯವಸ್ಥೆ ಮಾಡದೇ ವಾಹನದ ಪರ್ಮಿಟ್ ಉಲ್ಲಂಘನೆ ಮಾಡಿಕೊಂಡು ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಅಂಕೋಲಾ ಪಿ.ಎಸ್.ಐ ಗುರುನಾಥ ಹಾದಿಮನಿ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ಜಾನುವಾರುಗಳ ರಕ್ಷಣೆ ಮಾಡಿದ್ದಾರೆ.
ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.



