ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುಗಾದಿ ಹಬ್ಬದ ಆಚರಣೆಗೆ ಸಂಬಂಧಿಸಿದ ವಿಶೇಷ ಧಾರ್ಮಿಕ ಕಾರ್ಯಕ್ರಮಗಳ ಹಿನ್ನೆಲೆ ತಿರುಮಲ ತಿರುಪತಿ ದೇವಸ್ಥಾನ (TTD)ದಲ್ಲಿ ಕೆಲವು ದರ್ಶನ ಸೇವೆಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ದೇವಸ್ಥಾನದ ಪವಿತ್ರ ಶುದ್ಧೀಕರಣ ಕಾರ್ಯ ಮತ್ತು ಹಬ್ಬದ ಸಿದ್ಧತೆಗಳನ್ನು ಸುಗಮವಾಗಿ ನಡೆಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇವಾಲಯದಲ್ಲಿ ನಡೆಯುವ ವಿಶೇಷ ಶುದ್ಧೀಕರಣ ಕಾರ್ಯಕ್ರಮದ ಅಂಗವಾಗಿ ಮಾರ್ಚ್ 17ರಂದು ಗರ್ಭಗುಡಿ, ಆನಂದನಿಲಯಂ, ಮಂಟಪಗಳು, ಗೋಡೆಗಳು ಮತ್ತು ನೆಲವನ್ನು ವೈದಿಕ ಸಂಪ್ರದಾಯದಂತೆ ಶುದ್ಧಗೊಳಿಸಲಾಗುತ್ತದೆ. ನಾಮಂ ಕೋಪು, ಶ್ರೀಚೂರ್ಣಂ, ಕಸ್ತೂರಿ ಅರಿಶಿನ ಮತ್ತು ಪಚ್ಚೆ ಕರ್ಪೂರ ಸೇರಿದಂತೆ ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಪರಿಮಳಯುಕ್ತ ಮಿಶ್ರಣವನ್ನು ದೇವಸ್ಥಾನದ ಒಳಾಂಗಣದಲ್ಲಿ ಲೇಪಿಸಲಾಗುತ್ತದೆ.
ಈ ಕಾರ್ಯ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯುವುದರಿಂದ ಮಾರ್ಚ್ 17ರಂದು ವಿಶೇಷ ವಿರಾಮ ದರುಶನ ಹಾಗೂ ಅಷ್ಟದಳ ಪದ್ಮಾರಾಧನಾ ಸೇವೆಗಳನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ.
ಇದನ್ನೂ ಓದಿ:
ಇನ್ನೂ ಈ ವರ್ಷದ ಯುಗಾದಿ ಆಸ್ಥಾನ ಕಾರ್ಯಕ್ರಮವು ಮಾರ್ಚ್ 19ರಂದು ನಡೆಯಲಿದ್ದು, ಅಂದು ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ಮತ್ತು ಪಂಚಾಂಗ ಶ್ರವಣ ಕಾರ್ಯಕ್ರಮಗಳು ನಡೆಯಲಿವೆ. ಹೆಚ್ಚಿನ ಜನಸಂದಣಿ ನಿರೀಕ್ಷೆಯಿರುವುದರಿಂದ ಆ ದಿನವೂ ವಿಶೇಷ ವಿರಾಮ ದರುಶನ ಸ್ಥಗಿತಗೊಳಿಸಲಾಗಿದೆ.
ಈ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಭಕ್ತರು ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳಬೇಕು ಎಂದು ಟಿಟಿಡಿ ಮನವಿ ಮಾಡಿದೆ.



