ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಣಿನಾಡು ಬಳ್ಳಾರಿಯಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ಖಾಸಗಿ ಶಾಲೆಯ ಹಾಸ್ಟೆಲ್‌ನಲ್ಲಿ 9ನೇ ತರಗತಿ ವಿದ್ಯಾರ್ಥಿಯೊಬ್ಬ ನಡೆಸಿದ ಭೀಕರ ಹಲ್ಲೆಗೆ ಓರ್ವ ಬಾಲಕ ಬಲಿಯಾಗಿದ್ದಾನೆ. ಘಟನೆಯಲ್ಲಿ ಇತರ ಏಳು ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಗರದ ಹೊರವಲಯದ ಖಾಸಗಿ ಶಾಲಾ ಹಾಸ್ಟೆಲ್‌ನಲ್ಲಿ ಈ ಅಹಿತಕರ ಘಟನೆ ನಡೆದಿದೆ. ಆರೋಪಿ ವಿದ್ಯಾರ್ಥಿಯು ಕಬ್ಬಿಣದ ರಾಡ್‌ನಿಂದ ಹಾಸ್ಟೆಲ್‌ನ ಇತರ ವಿದ್ಯಾರ್ಥಿಗಳ ಮೇಲೆ ಅಟ್ಟಹಾಸ ಮೆರೆದಿದ್ದಾನೆ. ಅಷ್ಟೇ ಅಲ್ಲದೆ, ತಡೆಯಲು ಬಂದ ಹಾಸ್ಟೆಲ್ ವಾರ್ಡನ್ ಮೇಲೆಯೂ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಓರ್ವ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತ ಬಾಲಕನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಶಾಲಾ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. “ಆರೋಪಿ ಬಾಲಕ ಡ್ರಗ್ ಅಡಿಕ್ಟ್ ಆಗಿರಬಹುದು, ಅಮಲಿನಲ್ಲಿ ಈ ಕೃತ್ಯ ಎಸಗಿರುವ ಸಾಧ್ಯತೆಯಿದೆ. ಒಬ್ಬನೇ ವಿದ್ಯಾರ್ಥಿ ಇಷ್ಟು ಜನರ ಮೇಲೆ ಇಷ್ಟು ಭೀಕರವಾಗಿ ಹಲ್ಲೆ ನಡೆಸಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಇದು ಕೇವಲ ರಾಡ್‌ನಿಂದ ನಡೆದ ಹಲ್ಲೆಯಲ್ಲ, ಚಾಕುವಿನಿಂದ ಇರಿದಿರುವ ಅನುಮಾನವೂ ಇದೆ ಎಂದು ಅವರು ದೂರಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಬಳ್ಳಾರಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ಪೋಷಕರು ನೇರ ಹೊಣೆ ಹೊರಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತಲೆಮರೆಸಿಕೊಂಡಿರುವ ಆರೋಪಿ ವಿದ್ಯಾರ್ಥಿಗಾಗಿ ಶೋಧ ನಡೆಸುತ್ತಿದ್ದಾರೆ.



