ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೈದರಾಬಾದ್‌ನಲ್ಲಿ ಶುಕ್ರವಾರ ಅಲ್ಲು ಕುಟುಂಬದ ಸಂಭ್ರಮ ಮುಗಿಲು ಮುಟ್ಟಿತ್ತು. ಒಂದೆಡೆ ಅಲ್ಲು ಸಿರೀಶ್ ಅವರ ವೈವಾಹಿಕ ಜೀವನದ ಆರಂಭವಾದರೆ, ಮತ್ತೊಂದೆಡೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ತಮ್ಮ 15ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ರಾಜವೈಭೋಗದಿಂದ ಆಚರಿಸಿಕೊಂಡರು.
ಅಲ್ಲು ಅರ್ಜುನ್ ಸಹೋದರ ಹಾಗೂ ನಟ ಅಲ್ಲು ಸಿರೀಶ್ ಮತ್ತು ನಯನಿಕಾ ರೆಡ್ಡಿ ಅವರ ವಿವಾಹ ಮಹೋತ್ಸವ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ನೆರವೇರಿತು. ಈ ಸಂಭ್ರಮಕ್ಕೆ ಚಲನಚಿತ್ರ ರಂಗದ ಗಣ್ಯರು, ಆಪ್ತರು ಹಾಗೂ ಇಡೀ ಮೆಗಾ ಕುಟುಂಬ ಸಾಕ್ಷಿಯಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಈ ನವಜೋಡಿಯ ಫೋಟೋಗಳು ಮತ್ತು ವೀಡಿಯೊಗಳು ಸಖತ್ ವೈರಲ್ ಆಗುತ್ತಿವೆ.
ಅಲ್ಲು ಸಿರೀಶ್ ಮದುವೆಯಾದ ದಿನವೇ ಅಲ್ಲು ಅರ್ಜುನ್ ಮತ್ತು ಸ್ನೇಹಾ ರೆಡ್ಡಿ ಅವರ ದಾಂಪತ್ಯ ಜೀವನಕ್ಕೆ 15 ವರ್ಷ ತುಂಬಿರುವುದು ವಿಶೇಷ. ತಮ್ಮ ಈ ವಿಶೇಷ ದಿನವನ್ನು ಸ್ಮರಣೀಯವಾಗಿಸಲು ಅಲ್ಲು ಅರ್ಜುನ್, ಪತ್ನಿ ಸ್ನೇಹಾ ರೆಡ್ಡಿಗೆ ಅಂದಾಜು 4 ರಿಂದ 5 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಮರ್ಸಿಡಿಸ್-ಎಎಂಜಿ (Mercedes-AMG) ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. 2011ರಲ್ಲಿ ಪ್ರೇಮ ವಿವಾಹವಾಗಿದ್ದ ಈ ಜೋಡಿಗೆ ಈಗ ಅಯಾನ್ ಮತ್ತು ಅರ್ಹಾ ಎಂಬ ಇಬ್ಬರು ಮಕ್ಕಳಿದ್ದಾರೆ.



