ಹೊಸದಿಗಂತ ವರದಿ ರಾಮನಗರ:
ನಾವು ಯಾವ ಪಕ್ಷದಲ್ಲಿರುತ್ತೇವೆಯೊ ಆ ಪಕ್ಷಕ್ಕೆ ನಿಷ್ಠರಾಗಿರಬೇಕು. ರಾಜಣ್ಣ ಅವರು ಕಾಂಗ್ರೆಸ್ನಲ್ಲಿದ್ದರೂ ಪಕ್ಷಕ್ಕೆ ಅನುಕೂಲವಾಗುವಂತಹ ಒಂದೇ ಒಂದು ಹೇಳಿಕೆ ಕೊಟ್ಟಿಲ್ಲ. ಅವರಿಗೆ ಎಲ್ಲಿ ಅನುಕೂಲವಿದೆಯೊ ಅಲ್ಲಿಗೆ ಹೋಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಬಾಲಕೃಷ್ಣ ತಿಳಿಸಿದರು.
ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷವನ್ನು ಟೀಕಿಸಿರುವ ರಾಜಣ್ಣ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಒಂದೇ ಪಕ್ಷದಲ್ಲಿರುವ ನಾವೆಲ್ಲರೂ ಪಕ್ಷಕ್ಕೆ ನಿಯತ್ತಾಗಿರಬೇಕು. ಹಿಂದೆ ನಾನು ಜೆಡಿಎಸ್ನಲ್ಲಿದ್ದಾಗ ಆ ಪಕ್ಷಕ್ಕೆ ನಿಷ್ಠನಾಗಿದ್ದೆ. ನನಗೆ ಆ ಪಕ್ಷ ಬೇಜಾರಾಗಿದ್ದಕ್ಕೆ ಬಿಟ್ಟು ಬಂದೆ. ನಾವು ಅಲ್ಲಿ ಇದ್ದುಕೊಂಡೇ ಕಥೆ ಕಟ್ಟಿಲ್ಲ. ರಾಜಣ್ಣ ಅವರು ಇನ್ನಾದರೂ ಪಕ್ಷಕ್ಕೆ ಹಾನಿಯಾಗುವಂತಹ ಹೇಳಿಕೆ ಕೊಡಬಾರದು ಎಂದು ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ಗೃಹಲಕ್ಷ್ಮಿ ಹಣವನ್ನು ಹಿರಿಯೂರು ಉಪ ಚುನಾವಣೆಗೆ ದುರ್ಬಳಕೆ ಮಾಡಲಾಗುತ್ತಿದೆ’ ಎಂಬ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ‘ಯಾವ ಹಣ, ಯಾವ ರೀತಿ ದುರ್ಬಳಕೆಯಾಗುತ್ತಿದೆ ಎಂಬುದರ ಕುರಿತು ಅವರ ಬಳಿ ದಾಖಲೆ ಇದ್ದರೆ ಕೊಡಲು ಹೇಳಿ. ಸುಮ್ಮನೆ ಬುರುಡೆ ಬಿಡೋದು ಬೇಡ ಎಂದರು.
ಈಗ ಒಂದು ಹಂತಕ್ಕೆ ಬೆಳೆದಿರುವ ನಿಖಿಲ್ ಅವರು ಗೌರವಯುತವಾಗಿ ಮಾತನಾಡಬೇಕು. ಹಣ ದುರ್ಬಳಕೆ ಕುರಿತು ಅವರ ಬಳಿಕ ಬ್ಯಾಂಕ್ ಪಾಸ್ಬುಕ್ ಅಥವಾ ಇತರ ದಾಖಲೆ ಇದ್ದರೆ ಕೊಡಲಿ. ಇಲ್ಲದಿದ್ದರೆ, ದುರ್ಬಳಕೆ ಕುರಿತು ಕೇಂದ್ರ ಸರ್ಕಾರದ ಮೂಲಕ ತನಿಖೆ ಮಾಡಿಸಲಿ ಎಂದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಯಾವ ವಿಷಯದಲ್ಲಿ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸುತ್ತಾರೊ ಅದರ ದರ ಹೆಚ್ಚಾಗುತ್ತದೆ. ಪಾಪ! ಅವರ ಕೈ ಗುಣ ಸರಿ ಇಲ್ಲ ಎಂದು ವ್ಯಂಗ್ಯವಾಡಿದರು.
ರಾಜ್ಯ ಸರ್ಕಾರದ ಹಾಲಿನ ದರ ಏರಿಕೆ ವಿರೋಧಿಸಿ ಹಾಲಿನ ಕ್ಯಾನ್ ಹಿಡಿದು ಹೋರಾಟ ಮಾಡಿರುವ ಶೋಭಾ ಅವರ ಕುರಿತು ಪಟ್ಟಣದಲ್ಲಿ ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಹಿಂದೆ ಶೋಭಾ ಅವರು ಅಡುಗೆ ಅನಿಲ ದರ ಹೆಚ್ಚಾಗಿದೆ ಎಂದು ಸಿಲಿಂಡರ್ ಹಿಡಿದುಕೊಂಡು ಹೋರಾಟ ಮಾಡಿದ್ದರು. ಅದಾದ ಬಳಿಕ ಅನಿಲ ದರ ಮತ್ತಷ್ಟು ಹೆಚ್ಚಾಯಿತು ಎಂದು ತಿಳಿಸಿದರು.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ದರ ತೀರಾ ಕಡಿಮೆ ಇದೆ. ರೈತರಿಗೆ ಅನುಕೂಲವಾಗಲಿ ಎಂದು ನಾವು ದರ ಏರಿಕೆ ಮಾಡಿದ್ದೇವೆ. ಅಮಾಯಕ ರೈತರಿಗೆ ಸಹಾಯವಾಗಲಿ ಬಿಡಿ ಎಂದರು.
ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳವಾದರೆ ಸ್ವಾಭಾವಿಕವಾಗಿಯೇ ಬಸ್ ಟಿಕೆಟ್ ದರ ಸಹ ಹೆಚ್ಚಾಗುತ್ತದೆ. ಬಸ್ಗಳನ್ನು ನೀರಿನಲ್ಲಿ ಓಡಿಸಲು ಆಗುವುದಿಲ್ಲ. ಕೇಂದ್ರ ಸರ್ಕಾರದವರು ಇಂಧನ ದರ ಇಳಿಸಿದರೆ, ನಾವೂ ಟಿಕೆಟ್ ದರ ಕಡಿಮೆ ಮಾಡುತ್ತೇವೆ ಎಂದರು.



