March 9, 2026
Monday, March 9, 2026
spot_img

ದಲಿತರ ಹೊಟ್ಟೆ ಮೇಲೆ ಹೊಡೆದ ರಾಜ್ಯ ಸರ್ಕಾರ: ಮಾಜಿ ಸಚಿವ ಎ.ನಾರಾಯಣಸ್ವಾಮಿ ಟೀಕೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮೀಸಲಾತಿ ಕಡಿತಗೊಳಿಸುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ದಲಿತರ ಹೊಟ್ಟೆ ಮೇಲೆ ಹೊಡೆಯುತ್ತಿದೆ ಎಂದು ಕೇಂದ್ರ ಸರ್ಕಾರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಕಿಡಿಕಾರಿದರು.

ರಾಜ್ಯ ಸರ್ಕಾರ ಎಸ್.ಸಿ., ಎಸ್.ಟಿ.ಗೆ ಮಾಡಿರುವ ಮೀಸಲಾತಿ ಅನ್ಯಾಯ ವಿರುದ್ದ ಬೃಹತ್ ಜನಾಂದೋಲನ ಕುರಿತು ನಗರದ ವಾಲ್ಮೀಕಿ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೀಸಲಾತಿ ಹೆಚ್ಚಳದಿಂದ ಲಕ್ಷಾಂತರ ಮಕ್ಕಳಿಗೆ ಉನ್ಬತ ಹುದ್ದೆಗಳು ದೊರೆಯುತ್ತವೆ. ಆದರೆ ರಾಜ್ಯ ಸರ್ಕಾರ ದಲಿತ ಮಕ್ಕಳ ಬಾಯಿಗೆ ಮಣ್ಣು ಹಾಕಲು ಮುಂದಾಗಿದೆ. ದಲಿತರು ತೊಡೆ ತಟ್ಟಿದರೆ ಸರ್ಕಾರ ಕಿತ್ತೊಗೆಯುತ್ತಾರೆ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸಿದರು.

ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಕಾಂಗ್ರೆಸ್ ಸರ್ಕಾರ ಶೋಷಿತರಿಗೆ ದ್ರೋಹ ಮಾಡಿದೆ. ಬಿಜೆಪಿ ನೀಡಿದ ಮೀಸಲಾತಿ ಕಸಿಯುವ ಕೆಲಸ ಮಾಡುತ್ತಿದೆ. ದೌರ್ಜನ್ಯ ಮಾಡುತ್ತಿದೆ. ವೋಟ್ ಬ್ಯಾಂಕ್ ರಾಜಕಾರಣ ಮಾಡುವ ಕಾಂಗ್ರೆಸ್ ಶೋಷಿತರನ್ನು ತುಳಿಯುತ್ತಿದೆ. ನೆಹರೂ ಕಾಮದಿಂದಲೂ ಕಾಂಗ್ರೇಸ್ ಮೀಸಲಾತಿ ವಿರೋಧಿಸುತ್ತಾ ಬಂದಿದೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಸಹ ಮೀಸಲಾತಿ ವಿರೋಧಿಸಿದ್ದರು. ಈಗ ಸಿದ್ರಾಮಯ್ಯ ಅದನ್ನು ಮುಂದುವರಿಸಿದ್ದಾರೆ. ದಲಿತರ ದಬ್ಬಾಳಿಕೆಗೆ ತಕ್ಮ ಉತ್ತರ ನೀಡಲಾಗುವುದು ಎಂದು ಎಚ್ಚರಿಸಿದರು.

ಮಾಜಿ ಸಚಿವ ರಾಜುಗೌಡ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಮೀಸಲಾತಿ ತೆಗೆಯುತ್ತಾರೆ ಎಂದು ಕಾಂಗ್ರೇಸ್‌ನವರು ಅಪ್ರಚಾರ ಮಾಡುತ್ತಿದ್ದರು. ಈಗ ಅವರೇ ಮೀಸಲಾತಿ ಕಡಿತ ಮಾಡುತ್ತಿದ್ದಾರೆ. ಮೀಸಲಾತಿ ಹೆಚ್ಚಿಸಿದ ಬಿಜೆಪಿ ದಲಿತ ವಿರೋಧಿ, ಮೀಸಲಾತಿ ಕಸಿದ ಕಾಂಗ್ರೇಸ್ ದಲಿತ ಪ್ರೇಮಿಗಳು ಎಂಬುದು ಕಾಂಗ್ರೇಸ್ ವಾದ. ಇದು ನಮ್ಮ ಅಳಿವು ಉಳಿವಿನ ಪ್ರಶ್ನೆ. ಇದು ಇತಿಹಾಸ ನಿರ್ಮಾಣ ಮಾಡುವ ಹೋರಾಟ ಮಾಡಬೇಕು. ಮೀಸಲಾತಿ ಹೆಚ್ಚಳದ ಸಂದರ್ಭದಲ್ಲಿ ನಾವು ಆಡಳಿತ ಪಕ್ಷದಲ್ಲಿದ್ದರೂ ಪಾದಯಾತ್ರೆ ನಡೆಸಿದೆವು. ಈಗ ಕಾಂಗ್ರೇಸ್‌ನಲ್ಲಿರುವ ೧೪ ಜನ ಎಸ್.ಟಿ. ಶಾಸಕರು ಒಬ್ಬರೂ ಚಕಾರವೆತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ಮೀಸಲಾತಿ ಹೆಚ್ಚಳ ಕುರಿತು ಬಿ.ಶ್ರೀರಾಮಲು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದಿದ್ದರು. ಆದರೆ ಈಗ ಸತೀಶ್ ಜಾರಕಿಹೊಳಿ ಅಧಿಕಾರದ ಆಸೆಗೆ ಸಮಾಜ ಬಲಿ ಕೊಡುವ ಕೆಲಸ ಮಾಡುತ್ತಿದ್ದಾರೆ. ಖಾತೆಗೋಸ್ಕರ ಜಾತಿ ಬದಲಿಸುವವರು ಕಾಂಗ್ರೆಸಿನವರು. ಅಧಿಕಾರಕ್ಕೆ ಅಂಟಿಕೊಂಡಿರುವ ಕಾಂಗ್ರೆಸ್ ನವರಿಗೆ ಆತ್ಮಸಾಕ್ಷಿ ಎಂಬುದಿಲ್ಲ. ಇದು ನಮ್ಮ ಹಕ್ಕಿನ ಹೋರಾಟ, ಮೀಸಲಾತಿ ಹೆಚ್ಚಾಗುವವರೆಗೂ ಹೋರಾಡಬೇಕು. ಎಲ್ಲ ವರ್ಗದ ನಾಯಕರು ಈ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಮಾಜಿ ಶಾಸಕ ಪಿ.ರಾಜೀವ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಶೋಷಿತರಿಗೆ ನಿರಂತರ ವಂಚನೆ ಮಾಡುತ್ತಿದೆ. ಇದನ್ನು ವಿರೋಧಿಸಿ ಮಾ.೨೨ ರಂದು ಚಿತ್ರದುರ್ಗದಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಲಾಗುವುದು. ಸರ್ಕಾರದ ಮೇಲೆ ಒತ್ತಡ ಹಾಕಲು ವಿಧಾನಸೌಧ ಮುತ್ತಿಗೆ ಹಾಕಲಾಗುವುದು. ಹಾಗಾಗಿ ಕನಿಷ್ಟ ಒಂದು ಲಕ್ಷ ಜನ ಈ ಹೋರಾಟದಲ್ಲಿ ಭಾಗವಹಿಸಬೇಕು. ಪಾದಯಾತ್ರೆ ಬೆಂಗಳೂರಿಗೆ ತಲುಪುವ ಮೊದಲೇ ಸರ್ಕಾರ ಹೊರಾಟಗಾರರ ಬಳಿ ಬಂದು ಮಾತುಕತೆ ನಡೆಸಬೇಕು. ತಪ್ಪಿದಲ್ಲಿ ಮುಂದೆ ಆಗುವ ಅನಾಹುತಗಳಿಗೆ ರಾಜ್ಯ ಸರ್ಕಾರವೇ ಹೊಣೆ ಎಂದು ಎಚ್ಚರಿಸಿದರು.

ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿರಾದ ಮಹೇಶ್, ಶಿವನಗೌಡ ನಾಯಕ, ಶಾಸಕ ಡಾ.ಎಂ.ಚಂದ್ರಪ್ಪ, ಎಸ್.ಟಿ.ಮೋರ್ಚ ರಾಜ್ಯಾಧ್ಯಕ್ಷ ಸಿಮೆಂಟ್ ಮಂಜುನಾಥ್ ಮಾತನಾಡಿದರು. ಮಾಜಿ ಸಂಸದ ಡಾ.ಉಮೇಶ್ ಜಾದವ್, ಮಾಜಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಎಸ್.ಟಿ.ಮೋರ್ಚ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ವಿ.ಪ. ಸದಸ್ಯರಾದ ಹೇಮಲತಾ, ಎಸ್.ಸಿ. ಮೋರ್ಚ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ ಮತ್ತಿತರರು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !