March 9, 2026
Monday, March 9, 2026
spot_img

ಪಿಎಸ್‌ಐ ನೇಮಕಾತಿ ಹಗರಣ: ಆರೋಪಿ ಆರ್‌. ಡಿ. ಪಾಟೀಲ್​ಗೆ ಜಾಮೀನು ನಿರಾಕರಣೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪಿಎಸ್‌ಐ ನೇಮಕಾತಿ ಹಗರಣ ಸೇರಿದಂತೆ ಹಲವು ನೇಮಕಾತಿ ಅಕ್ರಮಗಳ ಆರೋಪಿ ಆರ್‌. ಡಿ. ಪಾಟೀಲ್‌ ​ಗೆ ಜಾಮೀನು ನೀಡಲು ಹೈಕೋರ್ಟ್​ ನಿರಾಕರಿಸಿದೆ.

2023ರಲ್ಲಿ ಕೋಕಾ ಕಾಯಿದೆಯಡಿ ಬಂಧನಕ್ಕೊಳಗಾಗಿ ಸದ್ಯ ಮೈಸೂರು ಕಾರಾಗೃಹದಲ್ಲಿರುವ ಪಾಟೀಲ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ರಾಜೇಶ್‌ ಕೆ. ರೈ ಅವರಿದ್ದ ಕಲಬುರಗಿ ಪೀಠ ಆದೇಶ ನೀಡಿದೆ.

ನೇಮಕಾತಿ ಪರೀಕ್ಷೆಗಳನ್ನು ತಿರುಚುವ, ಅಕ್ರಮವೆಸಗುವ ಕ್ರಿಮಿನಲ್‌ ಪಿತೂರಿಗಳಲ್ಲಿ ಪಾಟೀಲ್‌ ಪಾತ್ರವನ್ನು ತೋರಿಸುವ ಪ್ರಾಥಮಿಕ ಸಾಕ್ಷ್ಯವನ್ನು ಪ್ರಾಸಿಕ್ಯೂಷನ್‌ ಸಲ್ಲಿಸಿದೆ.

ಎಫ್‌ಡಿಎ ಮತ್ತು ಎಸ್‌ಡಿಎ ಪರೀಕ್ಷೆಗಳ ಸಂಬಂಧ ಎಂಟು ಪ್ರಕರಣಗಳು ಮತ್ತು 2021ರ ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳು ಸೇರಿದಂತೆ ಪರೀಕ್ಷಾ ದುಷ್ಕೃತ್ಯಕ್ಕಾಗಿ ಪಾಟೀಲ್‌ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಹಾಗಾಗಿ, ಜಾಮೀನು ನೀಡಲಾಗದು ಎಂದು ಎಂದು ಪೀಠ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ : ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನಡೆಸಿದ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಮತ್ತು ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ನೇಮಕ ಪರೀಕ್ಷೆಗಳಲ್ಲಿ ಅವ್ಯವಹಾರಗಳ ಸಂಬಂಧ ಹಣಕಾಸು ಗುಪ್ತಚರ ಘಟಕದ ಪೊಲೀಸ್‌ ವರಿಷ್ಠಾಧಿಕಾರಿ ರಾಘವೇಂದ್ರ ಕೆ. ಹೆಗ್ಡೆ ನೇತೃತ್ವದ ಅಪರಾಧ ತನಿಖಾ ವಿಭಾಗದ (ಸಿಐಡಿ)ವಿಶೇಷ ತಂಡ ಪಾಟೀಲ್ ರನ್ನು 2023ರ ನವೆಂಬರ್​ನಲ್ಲಿ ಬಂಧಿಸಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !