ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾದ ಬಳಿಕ ಶ್ರೀಲಂಕಾ ಕ್ರಿಕೆಟ್ ತಂಡದಲ್ಲಿ ಮಹತ್ವದ ಬದಲಾವಣೆ ನಡೆದಿದೆ.
ಸೂಪರ್ 8 ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದ ಪರಿಣಾಮ ತಂಡದ ಕೋಚ್ ಸನತ್ ಜಯಸೂರ್ಯ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಶ್ರೀಲಂಕಾ ಕ್ರಿಕೆಟ್ ಮಂಡಳಿ ಹೊಸ ಕೋಚ್ ಆಗಿ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಗ್ಯಾರಿ ಕರ್ಸ್ಟನ್ ಅವರನ್ನು ನೇಮಕ ಮಾಡಿದೆ.
ಇದನ್ನೂ ಓದಿ:
ಶ್ರೀಲಂಕಾ ಕ್ರಿಕೆಟ್ ಮಂಡಳಿ ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಪ್ರಕಟಿಸಿದ್ದು, ಕರ್ಸ್ಟನ್ ಏಪ್ರಿಲ್ 15ರಿಂದ ಅಧಿಕೃತವಾಗಿ ಜವಾಬ್ದಾರಿ ಸ್ವೀಕರಿಸಲಿದ್ದಾರೆ. ಅವರು ಎರಡು ವರ್ಷಗಳ ಕಾಲ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಅವರ ಅವಧಿ 2028ರ ಏಪ್ರಿಲ್ 14ರವರೆಗೆ ಇರಲಿದೆ.
ಮುಂದಿನ 2027ರ ಏಕದಿನ ವಿಶ್ವಕಪ್‌ಗಾಗಿ ಬಲಿಷ್ಠ ತಂಡವನ್ನು ರೂಪಿಸುವುದು ಕರ್ಸ್ಟನ್ ಎದುರಿನ ಪ್ರಮುಖ ಸವಾಲಾಗಿದೆ. ಆ ವಿಶ್ವಕಪ್ ದಕ್ಷಿಣ ಆಫ್ರಿಕಾ, ನಮೀಬಿಯಾ ಮತ್ತು ಜಿಂಬಾಬ್ವೆಯಲ್ಲಿ ನಡೆಯಲಿದೆ.
ಗ್ಯಾರಿ ಕರ್ಸ್ಟನ್ 2008ರಿಂದ 2011ರವರೆಗೆ ಭಾರತ ತಂಡದ ಹೆಡ್ ಕೋಚ್ ಆಗಿ ಸೇವೆ ಸಲ್ಲಿಸಿದ್ದರು. ಅವರ ಮಾರ್ಗದರ್ಶನದಲ್ಲೇ ಭಾರತ 2011ರ ಏಕದಿನ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿತ್ತು. ಬಳಿಕ ದಕ್ಷಿಣ ಆಫ್ರಿಕಾ ತಂಡಕ್ಕೂ ಅವರು ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.



