ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ಚಿತ್ರರಂಗದ ಬಹುಮುಖ ಪ್ರತಿಭೆ ಧನುಷ್ ಸದ್ಯ ನಟನೆಯ ಜೊತೆಗೆ ನಿರ್ದೇಶನದ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದಾರೆ. ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅವರು, ತಮ್ಮ ಮುಂದಿನ ನಿರ್ದೇಶನದ ಯೋಜನೆಯ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಮಗ ಯಾತ್ರಾಗೆ ಹೀರೋ ಅವಕಾಶ?
ಚಿತ್ರರಂಗದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಧನುಷ್ ಅವರ ಮುಂದಿನ ನಿರ್ದೇಶನದ ಸಿನಿಮಾದ ಮೂಲಕ ಅವರ ಹಿರಿಯ ಪುತ್ರ ಯಾತ್ರಾ ನಾಯಕನಾಗಿ ಪರಿಚಯವಾಗುವ ಸಾಧ್ಯತೆ ಇದೆ. ಈ ಚಿತ್ರವನ್ನು ಧನುಷ್ ಅವರ ಡಿ55 ಚಿತ್ರದ ನಿರ್ಮಾಣ ಸಂಸ್ಥೆಯೇ ನಿರ್ಮಾಣ ಮಾಡಲಿದ್ದು, ಇದೊಂದು ವಾಣಿಜ್ಯ ಮನರಂಜನಾ ಚಿತ್ರವಾಗಿರಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:
ತಾಂತ್ರಿಕ ತಂಡ ಸಜ್ಜು
ಚಿತ್ರದ ಛಾಯಾಗ್ರಹಣದ ಜವಾಬ್ದಾರಿಯನ್ನು ವೇಲ್‌ರಾಜ್ ವಹಿಸಿಕೊಳ್ಳಲಿದ್ದು, ಸಂಗೀತ ನಿರ್ದೇಶಕ ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸಲಿದ್ದಾರೆ. ಈಗಾಗಲೇ ಚಿತ್ರದ ಪೂರ್ವ ಸಿದ್ಧತಾ ಕಾರ್ಯಗಳು ಆರಂಭವಾಗಿವೆ ಎಂದು ತಿಳಿದುಬಂದಿದೆ.
ಮುಂದಿನ ವರ್ಷ ಶೂಟಿಂಗ್ ಆರಂಭ ಸಾಧ್ಯತೆ
ಈ ವರ್ಷದ ಕೊನೆಯ ಭಾಗದಲ್ಲಿ ಅಥವಾ 2027ರ ಆರಂಭದಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗುವ ನಿರೀಕ್ಷೆಯಿದೆ. ಈ ಹಿಂದೆ ತಮ್ಮ ಸೋದರಳಿಯ ಪವಿಶ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದ ಧನುಷ್, ಇದೀಗ ತಮ್ಮ ಪುತ್ರನನ್ನು ದೊಡ್ಡ ಪರದೆಗೆ ಕರೆತರುವ ಸಿದ್ಧತೆಯಲ್ಲಿದ್ದಾರೆ. ಚಿತ್ರದ ಉಳಿದ ಕಲಾವಿದರ ಆಯ್ಕೆ ಕುರಿತು ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.



