ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಬುಲ್ದಾನ ಜಿಲ್ಲೆಯಲ್ಲಿ ಪತ್ನಿಯನ್ನು ಕೊಲ್ಲಲು ಗಂಡನೇ ಸಂಚು ರೂಪಿಸಿ ಸುಪಾರಿ ಕೊಲೆಗಾರರ ಮೂಲಕ ಅಪಘಾತದಂತೆ ತೋರಿಸಿ ಹತ್ಯೆ ಮಾಡಿಸಿರುವ ಘಟನೆ ಬೆಳಕಿಗೆ ಬಂದಿದೆ.
ಈ ಪ್ರಕರಣದಲ್ಲಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ಪೊಲೀಸರ ಮಾಹಿತಿ ಪ್ರಕಾರ, ಪ್ರಕಾಶ್ ಗವಾಂಡೆ ಎಂಬಾತ ತನ್ನ ಪತ್ನಿ ವೃಶಾಲಿ ಅವರನ್ನು ಕೊಲ್ಲಲು ಯೋಜನೆ ರೂಪಿಸಿದ್ದನು. ವೃತ್ತಿಯಿಂದ ಶಿಕ್ಷಕಿಯಾಗಿದ್ದ ವೃಶಾಲಿ ಮಾರ್ಚ್ 2ರಂದು ಸ್ಕೂಟರ್‌ನಲ್ಲಿ ಹೋಗುತ್ತಿದ್ದ ವೇಳೆ ಬಿಳಿ ಬಣ್ಣದ ಕಾರು ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಮೇಲೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದರು. ಆರಂಭದಲ್ಲಿ ಇದು ಸಾಮಾನ್ಯ ರಸ್ತೆ ಅಪಘಾತವೆಂದು ಕಂಡುಬಂದಿತ್ತು.
ಇದನ್ನೂ ಓದಿ:
ಆದರೆ ತನಿಖೆಯ ವೇಳೆ MH 28 BB 5753 ನೋಂದಣಿ ಸಂಖ್ಯೆಯ ಕಾರು ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿತು. ನಂತರ ಆ ಕಾರು ಮನೀಶ್ ಸೂರ್ಯವಂಶಿ ಎಂಬಾತದದ್ದು ಎಂಬುದು ಪತ್ತೆಯಾಯಿತು. ವಿಚಾರಣೆಯಲ್ಲಿ ಆತನೇ ಘಟನೆಗೆ ಕಾರಣವಾಗಿದ್ದು, ಮಹಿಳೆಯ ಪತಿ ಕೊಲೆ ಸಂಚು ರೂಪಿಸಿದ್ದನ್ನು ಒಪ್ಪಿಕೊಂಡಿದ್ದಾನೆ.
ಪೊಲೀಸರ ಪ್ರಕಾರ, ಪ್ರಕಾಶ್ ಗವಾಂಡೆ ತನ್ನ ಪತ್ನಿಯನ್ನು ಕೊಲ್ಲಲು ಮೂರು ಬಾರಿ ವಿಷ ಹಾಕಲು ಯತ್ನಿಸಿ ವಿಫಲವಾಗಿದ್ದ, ನಂತರ ಮಂಗೇಶ್ ಚುಲ್ಕರ್ ಎಂಬಾತನಿಗೆ ಒಂದು ಲಕ್ಷ ರೂಪಾಯಿ ನೀಡಿ ಕಾರು ಚಾಲಕನನ್ನು ಬಳಸಿಕೊಂಡು ಸ್ಕೂಟರ್‌ಗೆ ಡಿಕ್ಕಿ ಹೊಡೆಯುವಂತೆ ಮಾಡಿದ್ದನು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನೂ ಬಂಧಿಸಿ ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಘಟನೆಗೆ ಕೌಟುಂಬಿಕ ಕಲಹ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.



