March 10, 2026
Tuesday, March 10, 2026
spot_img

ವಿದೇಶಿ ಅತಿಥಿಗಳ ಸ್ವಾಗತದಲ್ಲಿ ಮಂಡ್ಯ ಬಿಝಿ: ಈ ಬಾರಿ ಕೊಕ್ಕರೆ ಬೆಳ್ಳೂರಿಗೆ ನಿರೀಕ್ಷೆಗೂ ಮಿರಿದ ಪಕ್ಷಿಗಳ ಆಗಮನ!!

ಹೊಸದಿಗಂತ ಡಿಜಿಟಲ್ ಡೆಸ್ಕ್

ರಾಜ್ಯದ ಪ್ರಸಿದ್ಧ ಪಕ್ಷಿಧಾಮಗಳಲ್ಲಿ ಒಂದಾಗಿರುವ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರಿಗೆ ಸಂತಾನೋತ್ಪತ್ತಿಗಾಗಿ ಹೆಚ್ಚಿನ ಸಂಖ್ಯೆಯ ವಿದೇಶಿಯ ಪಕ್ಷಿಗಳು ಆಗಮಿಸಿವೆ.

ಪ್ರಮುಖವಾಗಿ ಹೆಜ್ಜಾರ್ಲೆ ಮತ್ತು ಬಣ್ಣದ ಕೊಕ್ಕರೆಗಳು ಪಕ್ಷಿಧಾಮಕ್ಕೆ ವಲಸೆ ಬಂದಿದ್ದು, ಹಲವು ವರ್ಷಗಳಿಂದಲೂ ಇದು ಮುಂದುವರಿದಿದೆ. ಪ್ರಸಕ್ತ ವರ್ಷದಲ್ಲಿ ನಿರೀಕ್ಷೆಗೂ ಮಿರಿದ ಪಕ್ಷಿಗಳು ಆಗಮಿಸಿದ್ದು , ಗ್ರಾಮದ ಜನರಲ್ಲಿ ಸಂತಸದ ವಾತಾವರಣವನ್ನು ಸೃಷ್ಟಿಸಿದೆ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರು ಹಲವು ದಶಕಗಳಿಂದಲೂ ಪಕ್ಷಿಗಳ ಸಂತಾನೋತ್ಪತ್ತಿಯ ತಾಣವಾಗಿ ಮಾರ್ಪಟ್ಟಿದೆ. ವಿಶ್ವದ ವಿವಿಧ ಭಾಗಗಳಿಂದ ಕೊಕ್ಕರೆ ಬೆಳ್ಳೂರಿಗೆ ಆಗಮಿಸುವ ಪಕ್ಷಿಗಳಲ್ಲಿ ಪ್ರಮುಖವಾಗಿ ಹೆಜ್ಜಾರ್ಲೆ ಗಳು ಈ ಗ್ರಾಮವನ್ನು ತಮ್ಮ ಆವಾಸಸ್ಥಾನವನ್ನಾಗಿಸಿಕೊಂಡಿವೆ. ಜನವರಿ ಮತ್ತು ಫೆಬ್ರವರಿ ಮಾಸದಲ್ಲಿ ಸುಮಾರು 30 ಜಾತಿ ಪಕ್ಷಿಗಳು ಇಲ್ಲಿಗೆ ಆಗಮಿಸಿದ್ದು, ನವೆಂಬರ್ ಮತ್ತು ಜೂನ್ ವರೆಗೂ ಇಲ್ಲಿಯೇ ನೆಲೆಸಿ, ಸಂತಾನೋತ್ಪತ್ತಿಯಲ್ಲಿ ತೊಡಗಲಿವೆ. ಬಳಿಕ ತನ್ನ ಮರಿಗಳೊಂದಿಗೆ ಹಿಂದಿರುಗಲಿವೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರೂ ಹಾಗೂ ಪಕ್ಷಿ ಪ್ರೇಮಿಗಳಿಗಾಗಿ ಅರಣ್ಯ ಇಲಾಖೆಯ ವತಿಯಿಂದ ಮಾಹಿತಿ ಚಿತ್ರ ಪ್ರದರ್ಶನ, ಮತ್ತು ಪಕ್ಷಿಗಳ ವೀಕ್ಷಣೆಗೆ ಅಗತ್ಯವಿರುವ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಅಷ್ಟೇ ಅಲ್ಲದೇ, ಗಾಳಿ, ಮಳೆಯಿಂದಾಗಿ ಆಕಸ್ಮಿಕವಾಗಿ ನೆಲಕ್ಕೆ ಬೀಳುವ ಮರಿಗಳ ರಕ್ಷಣೆ ಮತ್ತು ಪೋಷಣೆಗಾಗಿ ಅರಣ್ಯ ಇಲಾಖೆ ಶ್ರಮಿಸುತ್ತಿದೆ.


ಈ ಬಗ್ಗೆ ಮಾತನಾಡಿದ ಪಕ್ಷಿ ಸಂರಕ್ಷಕ ಬಿ. ಲಿಂಗೇಗೌಡ, ಕೊಕ್ಕರೆ ಬೆಳ್ಳೂರು ಗ್ರಾಮಕ್ಕೆ ಪಕ್ಷಿಗಳ ಆಗಮನಕ್ಕೆ ಸಂಬಂಧಿಸಿದಂತೆ 500 ವರ್ಷಗಳ ಇತಿಹಾಸವಿದೆ. ಈ ಕುರಿತಂತೆ ಕೆಲ ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ನವೆಂಬರ್ ನಲ್ಲಿ ಹೆಜ್ಜಾರ್ಲೆ ಜಾತಿಯ ಪಕ್ಷಿಗಳು ಹಾಗೂ ಜನವರಿಯಲ್ಲಿ ಬಣ್ಣ ಬಣ್ಣದ ಕೊಕ್ಕರೆಗಳು ಆಗಮಿಸಿ ಗೂಡುಕಟ್ಟಿ ಸಂತಾನೋತ್ಪತ್ತಿ ಮಾಡುತ್ತವೆ. ನಂತರ ತನ್ನ ಮೂಲಸ್ಥಾನಗಳಿಗೆ ತೆರಳುತ್ತವೆ. ಅರಣ್ಯ ವೀಕ್ಷಕ ಲೋಕೇಶ್, ಪಕ್ಷಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಸರ್ಕಾರದಿಂದ ಹಲವು ಕ್ರಮ ಕೈಗೊಳ್ಳಲಾಗಿದೆ. ಗ್ರಾಮದಲ್ಲಿ ಮರಗಳ ಮಾಲೀಕರಿಗೆ ಪರಿಹಾರ ನೀಡಲಾಗುತ್ತಿದೆ. ಈ ಮರಗಳು ಮುಂದಿನ ಹಲವು ವರ್ಷಗಳ ಕಾಲ ಉಳಿಯಬೇಕು ಎಂಬ ಕಾರಣದಿಂದ ಅವುಗಳ ಬುಡಕ್ಕೆ ಮಣ್ಣು ಹಾಕಿ ಸಂರಕ್ಷಣೆ ಮಾಡಲಾಗುತ್ತಿದೆ ಎಂದರು.

ಗ್ರಾಮಸ್ಥ ಲಿಂಗರಾಜು ಮಾತನಾಡಿ, ಗ್ರಾಮದ ಜನರಿಗೆ ವಂಶ ಪಾರಂಪರ್ಯವಾಗಿ ಪಕ್ಷಿಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದೇವೆ. ಪಕ್ಷಿಗಳ ಆಗಮನವಾಗದೇ ಇದ್ದಲ್ಲಿ ಗ್ರಾಮಸ್ಥರಿಗೆ ಆತಂಕ ಎದುರಾಗುತ್ತವೆ. ಜನ ಸಂಪರ್ಕದಲ್ಲೇ ಈ ಪಕ್ಷಿಗಳು ಗೂಡು ಕಟ್ಟಿ ಮರಿಗಳ ಪೋಷಣೆ ಮಾಡುವುದು ಗ್ರಾಮದ ವಿಶೇಷವಾಗಿದೆ ಎಂದರು. ಸ್ಥಳೀಯ ಗಿರೀಶ್, ವಾರಾಂತ್ಯದಲ್ಲಿ ಕರ್ನಾಟಕ ಮಾತ್ರವಲ್ಲದೇ, ದೇಶ ವಿದೇಶಗಳಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆದ ಕಾರಣ ಪ್ರವಾಸಿಗರಿಗೆ ಸರ್ಕಾರದಿಂದ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕಾದ ಅಗತ್ಯವಿದೆ ಎಂದು ಆಗ್ರಹಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !