May 2, 2026
Saturday, May 2, 2026
spot_img

ಆನೆ-ಮಾನವ ಸಂಘರ್ಷ ನಿಯಂತ್ರಿಸಲು ಪ್ರಾಮಾಣಿಕ ಪ್ರಯತ್ನ: ಸಚಿವ ಈಶ್ವರ ಬಿ. ಖಂಡ್ರೆ

ಹೊಸ ದಿಗಂತ ವರದಿ,ಮಡಿಕೇರಿ:

ಆನೆ-ಮಾನವ ಸಂಘರ್ಷ ನಿಯಂತ್ರಿಸಲು ೨೦೨೫-೨೬ನೇ ಸಾಲಿನಲ್ಲಿ ಮಡಿಕೇರಿ ವಿಭಾಗಕ್ಕೆ ೭ ಕಿ.ಮೀ ಮತ್ತು ನಾಗರಹೊಳೆ ವಿಭಾಗಕ್ಕೆ ೨೦ ಕಿ.ಮೀ. ರೈಲು ಹಳಿ ತಡೆಗೋಡೆ ಮಂಜೂರಾಗಿದ್ದು, ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಮಂಗಳವಾರ ಶೂನ್ಯವೇಳೆಯಲ್ಲಿ ಸುಜಾ ಕುಶಾಲಪ್ಪ ಅವರ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಫೆ.೨೮ರಂದು ಕಾಡಿನಂಚಿನ ನಿವಾಸಿ ೧೭ ವರ್ಷದ ಬಾಲಕಿ ಆನೆ ದಾಳಿಯಿಂದ ಮೃತಪಟ್ಟಿದ್ದರೆ, ಮಾ.೯ರಂದು ಕಾಡಿನೊಳಗೇ ವಾಸಿಸುತ್ತಿದ್ದ ೫೫ ವರ್ಷದ ಬುಡಕಟ್ಟು ಮಹಿಳೆ ಸಾವಿಗೀಡಾಗಿದ್ದಾರೆ. ಇದು ಅತ್ಯಂತ ನೋವಿನ ಸಂಗತಿ ಎಂದರು.

ಜೀವ ಅತ್ಯಂತ ಅಮೂಲ್ಯವಾದ್ದು, ಇದಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಅರಣ್ಯ ಇಲಾಖೆ ಮಾನವ-ವನ್ಯಜೀವಿ ಸಂಘರ್ಷ ತಡೆಯಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆನೆ ನಿಗ್ರಹ ಕಂದಕ, ಸೌರ ವಿದ್ಯುತ್ ಬೇಲಿ ನಿರ್ವಹಣೆ ಮಾಡಲಾಗುತ್ತಿದೆ. ಎರಡು ಆನೆ ಕಾರ್ಯಪಡೆ ಕಾರ್ಯನಿರ್ವಹಿಸುತ್ತಿದೆ. ಈಗ ಎರಡು ಪುಂಡಾನೆಗಳ ಸೆರೆಗೆ ಮುಖ್ಯ ವನ್ಯಜೀವಿ ಪರಿಪಾಲಕರು ಅನುಮತಿ ನೀಡಿದ್ದಾರೆ ಎಂದು ತಿಳಿಸಿದರು.

ಈ ಎರಡೂ ಪ್ರಕರಣದಲ್ಲಿ ಈಗಾಗಲೇ ತಲಾ ೫ ಲಕ್ಷ ರೂ. ಪರಿಹಾರವನ್ನು ಮೃತರ ಹತ್ತಿರದ ಬಂಧುಗಳಿಗೆ ವಿತರಿಸಲಾಗಿದ್ದು, ವಾರದೊಳಗೆ ಉಳಿದ ತಲಾ ೧೫ ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ಆನೆ-ಮಾನವ ಸಂಘರ್ಷ ನಿಯಂತ್ರಿಸಲು ಶಾಶ್ವತ ಪರಿಹಾರ ಕ್ರಮಗಳ ಬಗ್ಗೆಯೂ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !