ಹೊಸದಿಗಂತ ವರದಿ ಮಡಿಕೇರಿ:
ಕುಶಾಲನಗರ-ಮಡಿಕೇರಿ ನಡುವಿನ ರಾಷ್ಟ್ರೀಯ ಹೆದ್ದಾರಿಯ ಆನೆಕಾಡು ಬಳಿ ರವಿವಾರ ತಡರಾತ್ರಿ ಸಂಭವಿಸಿದ ಸರಣಿ ಅಪಘಾತದಲ್ಲಿ ಮೂವರು ಸಾವಿಗೀಡಾಗಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ.
ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಿರುವುದಾಗಿ ಹೇಳಲಾಗಿದೆ.
ಮೃತರನ್ನು ಸ್ವಿಫ್ಟ್ ಕಾರು ಚಾಲಕ, ಏಳನೇ ಹೊಸಕೋಟೆಯ ಇಲೆಕ್ಟ್ರಿಷಿಯನ್ ರತನ್ ಅಲಿಯಾಸ್ ಉಣ್ಣಿ, ಸಹೋದ್ಯೋಗಿ ಆದರ್ಶ್, ಅರಣ್ಯ ಇಲಾಖೆಯ ಗುತ್ತಿಗೆ ನೌಕರ ಕೊಡಗರಹಳ್ಳಿ ನಿವಾಸಿ ಕುಮಾರ್ ಎಂದು ಗುರುತಿಸಲಾಗಿದೆ.
ರವಿವಾರ ರಾತ್ರಿ ಗುಡ್ಡೆಹೊಸೂರಿನಲ್ಲಿ ಗಣಪತಿ ವಿಸರ್ಜನಾ ಕಾರ್ಯಕ್ರಮಕ್ಕೆ ತೆರಳಿ ಏಳನೇ ಹೊಸಕೋಟೆಯತ್ತ ಬರುತ್ತಿದ್ದ ಉಣ್ಣಿ ಅವರು ಚಾಲಿಸುತ್ತಿದ್ದ ಸ್ವಿಫ್ಟ್ ಕಾರು, ಎದುರಿನಲ್ಲಿದ್ದ ಬೈಕ್’ನ್ನು ಓವರ್’ಟೇಕ್ ಮಾಡುವ ಭರದಲ್ಲಿ ನಿಯಂತ್ರಣ ತಪ್ಪಿ ಬೈಕ್’ಗೆ ಡಿಕ್ಕಿಯಾಗಿ ನಂತರ ಎದುರಿನಿಂದ ಕುಶಾಲನಗರದತ್ತ ತೆರಳುತ್ತಿದ್ದ ಪಿಕಪ್ ವಾಹನಕ್ಕೆ ಅಪ್ಪಳಿಸಿದೆ. ಅಪಘಾತದ ರಭಸಕ್ಕೆ ಬೈಕ್ ರಸ್ತೆಯ ಬದಿಗೆ ಎಸೆಯಲ್ಪಟ್ಟು, ಸವಾರ ಕುಮಾರ್ ಗಂಭೀರವಾಗಿ ಗಾಯಗೊಂಡರೆ, ಕಾರು ಹಾಗೂ ಪಿಕಪ್ ವಾಹನ ನಜ್ಜುಗುಜ್ಜಾಗಿವೆ.
ಪರಿಣಾಮವಾಗಿ ಕಾರಿನ ಚಾಲಕ ಉಣ್ಣಿ ಹಾಗೂ ಅದರಲ್ಲಿದ್ದ ಆದರ್ಶ್ ಸ್ಥಳದಲ್ಲೇ ಸಾವಿಗೀಡಾಗಿದ್ದು, ಬೈಕ್ ಸವಾರ ಕುಮಾರ್ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಪಿಕಪ್ ವಾಹನದಲ್ಲಿದ್ದವರು ಹಾಗೂ ಕಾರಿನಲ್ಲಿದ್ದ ಸುವಿನ್, ಚಂದ್ರಶೇಖರ್ ಹಾಗೂ ಅಜಯ್ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದು, ಅವರನ್ನು ಕುಶಾಲನಗರದ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಮೈಸೂರು, ಮಡಿಕೇರಿ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಅವರ ಪೈಕಿ ಇಬ್ಬರ ಸ್ಥಿತಿ ಗಂಭೀರವಿರುವುದಾಗಿ ತಿಳಿದುಬಂದಿದೆ.



