ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಸ್ತುತ 2 ಎಲ್ ಎನ್ ಜಿ ಕಚ್ಚಾ ತೈಲ ಹಡುಗುಗಳು ಭಾರತದತ್ತ ಬರುತ್ತಿವೆ. ದೇಶದ ತೈಲ ದಾಸ್ತಾನು ಹಾಗೂ ಎಲ್ ಪಿ ಜಿ ಪೂರೈಕೆ ಸರಣಿ ಪರಿಸ್ಥಿತಿ ಕುರಿತು ಕೇಂದ್ರ ಸರ್ಕಾರ ತೀವ್ರ ನಿಗಾವಹಿಸಿದ್ದು, ಕಾಳಸಂತೆ ಮಾರಾಟ ತಡೆಯಲು ಅಗತ್ಯಕ್ರಮ ಕೈಗೊಳ್ಳಲಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತ ಶರ್ಮ ಹೇಳಿದ್ದಾರೆ.
ದೆಹಲಿಯಲ್ಲಿಂದು ಅಂತರ್ ಸಚಿವಾಲಯದ ಸುದ್ದಿಗೋಷ್ಠಿಯಲ್ಲಿ ಅವರು, ಸರ್ಕಾರದ ಹಲವು ಕ್ರಮಗಳಿಂದ ದೇಶದಲ್ಲಿ ಎಲ್ ಪಿಜಿ ಅಡುಗೆ ಅನಿಲ ಉತ್ಪಾದನೆ ಶೇಕಡ 28 ರಷ್ಟು ಹೆಚ್ಚಳವಾಗಿದೆ. ವಿತರಣೆ ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿರಿಸಲು ಅಗತ್ಯ ಕ್ರಮ ಕೈಗೊಂಡಿದ್ದು, ನಾಗರಿಕರು ಆತಂಕಪಡುವ ಅಗತ್ಯವಿಲ್ಲ ಎಂದರು.
ಎಲ್ ಪಿಜಿ ಗೃಹ ಬಳಕೆದಾರರಿಗೆ ಅಡುಗೆ ಅನಿಲ ಪೂರೈಕೆ ಅಬಾಧಿತವಾಗಿ ಮುಂದುವರಿಯುವುದನ್ನು ಖಾತ್ರಿ ಪಡಿಸುವ ನಿಟ್ಟಿನಲ್ಲಿ ಎಲ್ ಪಿಜಿ ಉತ್ಪಾದನೆ ಹೆಚ್ಚಿಸುವಂತೆ ದೇಶದ ಎಲ್ಲಾ ತೈಲ ಸಂಸ್ಕರಣಾ ಘಟಕಗಳಿಗೆ ಕೇಂದ್ರ ಸರ್ಕಾರ ಮಾ.9ರಂದು ನಿರ್ದೇಶನ ನೀಡಿತ್ತು. ಇದರಿಂದಾಗಿ ಉತ್ಪಾದನೆ ಹೆಚ್ಚಳವಾಗಿದ್ದು, ದೇಶದಲ್ಲಿ ಅಡುಗೆ ಅನಿಲ ಪೂರೈಕೆಯಲ್ಲಿ ಯಾವುದೇ ತೊಂದರೆಯಿಲ್ಲ ಎಂದು ಹೇಳಿದ್ದಾರೆ.
ದೇಶದಲ್ಲಿ ಸುಸಜ್ಜಿತ ಮತ್ತು ವಿಸ್ತೃತ ಅಡುಗೆ ಅನಿಲ ವಿತರಣಾ ಜಾಲವಿದ್ದು, ಇವುಗಳಲ್ಲಿ ಯಾವುದೇ ರೀತಿಯ ಇಂಧನ ಕೊರತೆ ಉಂಟಾಗಿಲ್ಲ. ಪ್ರತಿದಿನ 50 ಲಕ್ಷ ಎಲ್ ಪಿಜಿ ಸಿಲಿಂಡರ್ ಪೂರೈಸಲಾಗುತ್ತಿದ್ದು, ಇದರಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ನೈಸರ್ಗಿಕ ಅನಿಲ ಬೇಡಿಕೆ ಮತ್ತು ಪೂರೈಕೆ ಜಾಲ ಕೂಡ ನಿಯಂತ್ರಣದಲ್ಲಿದೆ ಎಂದರು. ಜಾಗತಿಕ ಅನಿಶ್ಚಿತ ಪರಿಸ್ಥಿತಿ ಹಿನ್ನಲೆಯಲ್ಲಿ ವಾಣಿಜ್ಯ ಅಡುಗೆ ಅನಿಲ ವಿತರಣೆಯಲ್ಲಿ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಅತ್ಯಗತ್ಯ ಸೇವೆಗಳಿಗೆ ಆದ್ಯತೆ ನೀಡಲಾಗಿದೆ. ಹೋಟೆಲ್, ರೆಸ್ಟೋರೆಂಟ್ ಗಳ ಎಲ್ ಪಿಜಿ ಬೇಡಿಕೆ ಪೂರೈಸಲು 3 ತೈಲ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ, ಅಲ್ಲದೆ ಜಿಲ್ಲಾ ಮಟ್ಟದ ಮಂಡಳಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಅಡುಗೆ ಅನಿಲ ಸುಗಮ ಪೂರೈಕೆಯಲ್ಲಿ ಹಾಗೂ ಆದ್ಯತೆ ಮೇರೆಗೆ ಫಲಾನುಭವಿಗಳನ್ನು ಗುರುತಿಸುವಲ್ಲಿ ರಾಜ್ಯ ಸರ್ಕಾರಗಳ ಪಾತ್ರ ಮಹತ್ವದ್ದು ಎಂದ ಅವರು, ರಾಜ್ಯಗಳಿಗೆ ಹೆಚ್ಚುವರಿಯಾಗಿ ಸೀಮೆಎಣ್ಣೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ದೇಶದ ತೈಲ ಬೇಡಿಕೆಯ ಶೇಕಡ 70ರಷ್ಟು ಪ್ರಮಾಣ ಹುರ್ಮುಜ್ ಪ್ರದೇಶ ಹೊರತು ಪಡಿಸಿ ಇತರೆ ಮೂಲಗಳಿಂದ ಬರುತ್ತಿದೆ. ದೇಶದ ತೈಲ ಮಾರುಕಟ್ಟೆ ಸಂಸ್ಧೆಗಳು ವಿವಿಧ ಮೂಲಗಳಿಂದ ಅಗತ್ಯ ಪ್ರಮಾಣದ ಕಚ್ಚಾ ತೈಲ ಆಮದು ಮುಂದುವರಿಯುವುದನ್ನು ಖಾತ್ರಿ ಪಡಿಸಿವೆ. ಪ್ರಸ್ತುತ 2 ಎಲ್ ಎನ್ ಜಿ ಕಚ್ಚಾ ತೈಲ ಹಡುಗುಗಳು ಭಾರತದತ್ತ ಬರುತ್ತಿವೆ ಎಂದು ಅವರು ಹೇಳಿದ್ದಾರೆ.



