September 28, 2026
Monday, September 28, 2026
spot_img

ನಿಯಂತ್ರಣ ತಪ್ಪಿ ಹೆದ್ದಾರಿಗೆ ಬಿದ್ದ ಟ್ರೈನಿಂಗ್ ವಿಮಾನ: ಪೈಲಟ್‌ಗೆ ಗಂಭೀರ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ ಕಾಸಗಂಜ್ ಜಿಲ್ಲೆಯ ಕ್ಯಾಂಪುರ್-ಬಹೇರಿಯಾ ಪ್ರದೇಶದ ಬಳಿ ಇಂದು ಭೀಕರ ವಿಮಾನ ಅಪಘಾತ ಸಂಭವಿಸಿದೆ. ನಿರ್ಮಾಣ ಹಂತದ ಹೆದ್ದಾರಿಯಲ್ಲಿ ತರಬೇತಿ ವಿಮಾನವೊಂದು ಹಠಾತ್ ಆಗಿ ಪತನಗೊಂಡಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ. ವಿಮಾನವು ಕೆಳಗೆ ಬೀಳುತ್ತಿದ್ದಂತೆ ಭಾರಿ ಶಬ್ದ ಕೇಳಿಬಂದಿದ್ದು, ಸುತ್ತಮುತ್ತಲಿನ ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದ್ದಾರೆ.

ಮಹಿಳಾ ಪೈಲಟ್‌ಗೆ ಗಂಭೀರ ಗಾಯ

ಪ್ರಾಥಮಿಕ ವರದಿಗಳ ಪ್ರಕಾರ, ಅಪಘಾತದ ಸಮಯದಲ್ಲಿ ವಿಮಾನದಲ್ಲಿ ಒಬ್ಬರೇ ಮಹಿಳಾ ತರಬೇತಿ ಪೈಲಟ್ ಇದ್ದರು. ವಿಮಾನ ಪತನದ ತೀವ್ರತೆಗೆ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಮತ್ತು ರಕ್ಷಣಾ ಸಿಬ್ಬಂದಿ, ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮಹಿಳಾ ಪೈಲಟ್ ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು, ಬಿಗಿ ಬಂದೋಬಸ್ತ್

ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ತುರ್ತಾಗಿ ಧಾವಿಸಿ ಇಡೀ ಪ್ರದೇಶವನ್ನು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದಾರೆ. ವಿಮಾನದ ಅವಶೇಷಗಳನ್ನು ನೋಡಲು ಸಾರ್ವಜನಿಕರು ಮುಗಿಬಿದ್ದ ಹಿನ್ನೆಲೆಯಲ್ಲಿ, ಪರಿಸ್ಥಿತಿಯನ್ನು ನಿಯಂತ್ರಿಸಲು ಅಪಘಾತದ ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ತಾಂತ್ರಿಕ ದೋಷ ಅಥವಾ ಹವಾಮಾನ ವೈಪರೀತ್ಯದಿಂದ ಈ ದುರಂತ ಸಂಭವಿಸಿದೆಯೇ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

Must Read