October 16, 2026
Friday, October 16, 2026
spot_img

ಪ್ರತಿ ಸಾವಿಗೂ ಸೇಡು ಗ್ಯಾರಂಟಿ: ಅಧಿಕಾರಕ್ಕೇರುತ್ತಿದ್ದಂತೆ ಅಮೆರಿಕ ವಿರುದ್ಧ ಗುಡುಗಿದ ಮೊಜ್ತಬಾ ಖಮೇನಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್‌ನ ಸರ್ವೋಚ್ಚ ನಾಯಕನಾಗಿ ಪದಗ್ರಹಣ ಮಾಡಿದ ಬಳಿಕ ಮೊಜ್ತಬಾ ಖಮೇನಿ ಅವರು ತಮ್ಮ ಮೊದಲ ಅಧಿಕೃತ ಹೇಳಿಕೆಯಲ್ಲಿ ಕಠಿಣ ನಿಲುವನ್ನು ಪ್ರಕಟಿಸಿದ್ದಾರೆ. ಗುರುವಾರ ಇರಾನ್‌ನ ಸರ್ಕಾರಿ ದೂರದರ್ಶನದ ಮೂಲಕ ಹೊರಬಿದ್ದ ಈ ಹೇಳಿಕೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದೆ.

ಜಗತ್ತಿನ ಪ್ರಮುಖ ತೈಲ ಸಾಗಾಣಿಕಾ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯನ್ನು ತೆರೆಯುವುದಿಲ್ಲ ಎಂದು ಖಮೇನಿ ಸ್ಪಷ್ಟಪಡಿಸಿದ್ದಾರೆ. ಇದು ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆಯಿದೆ.

“ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಎಲ್ಲಾ ಸೇನಾ ನೆಲೆಗಳನ್ನು ತಕ್ಷಣವೇ ಮುಚ್ಚಬೇಕು. ಒಂದು ವೇಳೆ ಕಾರ್ಯಾಚರಣೆ ಮುಂದುವರಿಸಿದರೆ ಅವುಗಳ ಮೇಲೆ ದಾಳಿ ಮಾಡುವುದು ಖಚಿತ” ಎಂದು ಖಮೇನಿ ಗುಡುಗಿದ್ದಾರೆ.

ಇರಾನ್ ಮೇಲೆ ನಡೆದ ದಾಳಿಗಳು ಮತ್ತು ಸಾವುಗಳಿಗೆ ತಕ್ಕ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂದು ಅವರು ಪ್ರತಿಜ್ಞೆ ಮಾಡಿದ್ದಾರೆ. ನೆರೆಹೊರೆಯ ರಾಷ್ಟ್ರಗಳಲ್ಲಿನ ಗುರಿಗಳ ಮೇಲಿನ ದಾಳಿಗಳು ಮುಂದುವರಿಯಲಿವೆ ಎಂಬ ಆತಂಕಕಾರಿ ಸಂದೇಶವನ್ನೂ ನೀಡಿದ್ದಾರೆ.

ವಿಶೇಷವೆಂದರೆ, ಮೊಜ್ತಬಾ ಖಮೇನಿ ಅವರು ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳದೆ, ಕೇವಲ ಪತ್ರಿಕಾ ಪ್ರಕಟಣೆಯ ಮೂಲಕ ತಮ್ಮ ನಿಲುವನ್ನು ನಿರೂಪಕರಿಂದ ಓದಿಸಿದ್ದಾರೆ. ಇದು ಇರಾನ್‌ನ ಮುಂಬರುವ ದಿನಗಳ ಆಕ್ರಮಣಕಾರಿ ವಿದೇಶಾಂಗ ನೀತಿಯ ಮುನ್ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ.

Must Read