ಹೊಸದಿಗಂತ ಡಿಜಿಟಲ್ ಡೆಸ್ಕ್:
ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರುಶನ ನೀಡುವ ಹಾಸನದ ಅಧಿದೇವತೆ ಶ್ರೀ ಹಾಸನಾಂಬೆ ದೇವಿಯ ದರುಶನೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ.
ದೀಪಾವಳಿ ಸಂದರ್ಭದಲ್ಲಿ ನಡೆಯುವ ಈ ಪ್ರಸಿದ್ಧ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಈ ಬಾರಿ ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ದೇವಸ್ಥಾನದ ಬಾಗಿಲು ತೆರೆಯಲಿದೆ. ದೇವಿಯ ದರುಶನ ಪಡೆಯಲು ಕಾತರರಾಗಿರುವ ಭಕ್ತರಿಗಾಗಿ ಜಿಲ್ಲಾಡಳಿತ ಹಾಗೂ ರೈಲ್ವೆ ಇಲಾಖೆ ಸಿದ್ಧತೆಗಳನ್ನು ಕೈಗೊಂಡಿವೆ.
ಅ.29ರಂದು ದೇಗುಲದ ಬಾಗಿಲು ತೆರೆಯಲಿದೆ
ಸಂಪ್ರದಾಯದಂತೆ ಅಶ್ವಯುಜ ಪೂರ್ಣಿಮೆಯ ನಂತರ ಬರುವ ಗುರುವಾರವಾದ ಅಕ್ಟೋಬರ್ 29ರಂದು ಮಧ್ಯಾಹ್ನ 12 ಗಂಟೆಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಆದರೆ ಅಂದು ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಅಕ್ಟೋಬರ್ 30ರ ಶುಕ್ರವಾರದಿಂದ ನವೆಂಬರ್ 10ರ ಮಂಗಳವಾರದವರೆಗೆ ಭಕ್ತರು ಹಾಸನಾಂಬೆ ದೇವಿಯ ದರುಶನ ಪಡೆಯಬಹುದು. ನವೆಂಬರ್ 11ರಂದು ಬಲಿಪಾಡ್ಯಮಿಯ ದಿನದಂದು ವಿಶೇಷ ಪೂಜಾ ವಿಧಿವಿಧಾನಗಳ ಬಳಿಕ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ.
ಇದನ್ನೂ ಓದಿ:
23 ಲಕ್ಷ ಭಕ್ತರ ಭೇಟಿ: ವ್ಯವಸ್ಥೆಗೆ ಸಿದ್ಧತೆ
ಕಳೆದ ವರ್ಷ 23 ಲಕ್ಷಕ್ಕೂ ಅಧಿಕ ಭಕ್ತರು ಹಾಸನಾಂಬೆ ದೇವಿಯ ದರುಶನ ಪಡೆದಿದ್ದರು. ಈ ಬಾರಿಯೂ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಭಕ್ತರ ಸುಗಮ ದರುಶನ, ಸರತಿ ಸಾಲಿನ ನಿರ್ವಹಣೆಗೆ ಬ್ಯಾರಿಕೇಡ್ ಅಳವಡಿಕೆ ಹಾಗೂ ಪ್ರಸಾದ ವಿತರಣೆ ಸೇರಿದಂತೆ ಅಗತ್ಯ ವ್ಯವಸ್ಥೆಗಳ ಕುರಿತು ಗಮನಹರಿಸಲಾಗಿದೆ.
ಭಕ್ತರ ಅನುಕೂಲಕ್ಕೆ ವಿಶೇಷ ರೈಲುಗಳು
ರಾಜ್ಯದ ವಿವಿಧ ಭಾಗಗಳಿಂದ ಹಾಸನಕ್ಕೆ ಆಗಮಿಸುವ ಭಕ್ತರ ಪ್ರಯಾಣ ಸುಗಮಗೊಳಿಸಲು ನೈಋತ್ಯ ರೈಲ್ವೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ. ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ಕೆಎಸ್ಆರ್ ಬೆಂಗಳೂರು–ಹಾಸನ ಹಾಗೂ ಅರಸೀಕೆರೆ–ಹಾಸನ ಮಾರ್ಗಗಳಲ್ಲಿ ವಿಶೇಷ ರೈಲುಗಳು ಸಂಚರಿಸಲಿವೆ.
ದೇವಿಯ ದರುಶನ ಪಡೆದ ಹಾಸನ ಡಿಸಿ, ಎಸ್ಪಿ
ಇದೇ ವೇಳೆ, ಈ ಹಿಂದೆ ಗಣಪತಿ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ಅವರ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯಗಳು ಮಾತುಕತೆಯ ಬಳಿಕ ಬಗೆಹರಿದಿವೆ. ಇಬ್ಬರೂ ಅಧಿಕಾರಿಗಳು ಒಟ್ಟಿಗೆ ಹಾಸನಾಂಬೆ ದೇವಸ್ಥಾನಕ್ಕೆ ಭೇಟಿ ನೀಡಿ ದರುಶನ ಪಡೆದು, ಜಾತ್ರೆಯ ಸಿದ್ಧತೆಗಳ ಕುರಿತು ಚರ್ಚಿಸಿದ್ದಾರೆ.



