March 12, 2026
Thursday, March 12, 2026
spot_img

ಜಾಗತಿಕ ವ್ಯಾಪಾರ ಸಮರ: 16 ರಾಷ್ಟ್ರಗಳ ಕೈಗಾರಿಕಾ ನೀತಿಗಳ ಮೇಲೆ ಅಮೆರಿಕ ಕಣ್ಣು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಆರ್ಥಿಕ ಹಿತಾಸಕ್ತಿ ರಕ್ಷಿಸಲು ಮುಂದಾಗಿರುವ ಅಮೆರಿಕ ಸರ್ಕಾರ, ಭಾರತ ಸೇರಿದಂತೆ ತನ್ನ 16 ಪ್ರಮುಖ ವ್ಯಾಪಾರಿ ಪಾಲುದಾರ ದೇಶಗಳ ವಿರುದ್ಧ ಬೃಹತ್ ತನಿಖೆಗೆ ಆದೇಶಿಸಿದೆ. ಅಮೆರಿಕದ ಕಾನೂನಿನ ‘ಸೆಕ್ಷನ್ 301’ ಅಡಿಯಲ್ಲಿ ಈ ದೇಶಗಳು ಅನುಸರಿಸುತ್ತಿರುವ ಕೈಗಾರಿಕಾ ನೀತಿಗಳು ಮತ್ತು ‘ಅನ್ಯಾಯದ ವ್ಯಾಪಾರ ಕ್ರಮಗಳ’ ಬಗ್ಗೆ ಆಳವಾದ ಅವಲೋಕನ ನಡೆಸಲು ಟ್ರಂಪ್ ಸರ್ಕಾರ ನಿರ್ಧರಿಸಿದೆ.

ಇತ್ತೀಚೆಗಷ್ಟೇ ಅಮೆರಿಕದ ಸರ್ವೋಚ್ಚ ನ್ಯಾಯಾಲಯವು ಟ್ರಂಪ್ ಸರ್ಕಾರದ ಈ ಹಿಂದಿನ ಕಠಿಣ ಟ್ಯಾರಿಫ್ (ಸುಂಕ) ಕ್ರಮಗಳನ್ನು ಅನೂರ್ಜಿತಗೊಳಿಸಿ, ಶೇ. 10ರಷ್ಟು ಬೇಸ್‌ಲೈನ್ ಟ್ಯಾರಿಫ್ ನಿಗದಿಪಡಿಸಿತ್ತು. ಆದರೆ, ಕೋರ್ಟ್ ತೀರ್ಪನ್ನು ಒಪ್ಪದ ಟ್ರಂಪ್ ಸರ್ಕಾರ, ತನ್ನ ಟ್ಯಾರಿಫ್ ನೀತಿಯನ್ನು ಸಮರ್ಥಿಸಿಕೊಳ್ಳುತ್ತಲೇ ಇದೆ. ಅಮೆರಿಕದ ಕೈಗಾರಿಕೆಗಳಿಗೆ ಇತರ ದೇಶಗಳ ಅಸಮರ್ಪಕ ನೀತಿಗಳಿಂದ ಹೊಡೆತ ಬೀಳುತ್ತಿದೆ ಎಂಬ ಶಂಕೆಯ ಮೇಲೆ ಈಗ ಈ ತನಿಖೆ ಆರಂಭವಾಗಿದೆ.

ಅಮೆರಿಕದ ತನಿಖಾ ವ್ಯಾಪ್ತಿಗೆ ಒಳಪಟ್ಟಿರುವ 16 ಪ್ರಮುಖ ರಾಷ್ಟ್ರಗಳ ಪಟ್ಟಿ ಇಲ್ಲಿದೆ:

ಭಾರತ, ಚೀನಾ, ಜಪಾನ್, ದಕ್ಷಿಣ ಕೊರಿಯಾ, ತೈವಾನ್, ವಿಯೆಟ್ನಾಂ, ಥಾಯ್ಲೆಂಡ್, ಮಲೇಷ್ಯಾ, ಕಾಂಬೋಡಿಯಾ, ಸಿಂಗಾಪುರ್, ಇಂಡೋನೇಷ್ಯಾ ಮತ್ತು ಬಾಂಗ್ಲಾದೇಶ. ಐರೋಪ್ಯ ಒಕ್ಕೂಟ (EU), ಸ್ವಿಟ್ಜರ್ಲೆಂಡ್ ಮತ್ತು ನಾರ್ವೆ, ಮೆಕ್ಸಿಕೋ.

ವಿಶೇಷವೆಂದರೆ, ಅಮೆರಿಕದ ಎರಡನೇ ಅತಿದೊಡ್ಡ ಟ್ರೇಡಿಂಗ್ ಪಾರ್ಟ್ನರ್ ಆಗಿರುವ ಕೆನಡಾವನ್ನು ಈ ತನಿಖೆಯಿಂದ ಹೊರತುಪಡಿಸಲಾಗಿದೆ. ಆದರೆ, ಚೀನಾ ಮತ್ತು ಭಾರತದಂತಹ ಬೃಹತ್ ಆರ್ಥಿಕತೆಗಳ ಮೇಲೆ ಅಮೆರಿಕ ಕಣ್ಣಿಟ್ಟಿರುವುದು ಜಾಗತಿಕ ವ್ಯಾಪಾರ ವಲಯದಲ್ಲಿ ಸಂಚಲನ ಮೂಡಿಸಿದೆ.

ಒಂದು ವೇಳೆ ಈ ತನಿಖೆಯಲ್ಲಿ ಸದ್ಯದ ಕೈಗಾರಿಕಾ ನೀತಿಗಳು ಅಮೆರಿಕದ ವ್ಯಾಪಾರಕ್ಕೆ ಧಕ್ಕೆ ತರುತ್ತಿವೆ ಎಂದು ಸಾಬೀತಾದಲ್ಲಿ, ಆಯಾ ದೇಶಗಳಿಂದ ಆಮದಾಗುವ ವಸ್ತುಗಳ ಮೇಲೆ ಅಮೆರಿಕ ಭಾರಿ ಪ್ರಮಾಣದ ಸುಂಕ ವಿಧಿಸುವ ಸಾಧ್ಯತೆಯಿದೆ. ಇದು ಭಾರತದ ರಫ್ತು ವಲಯದ ಮೇಲೆಯೂ ಪ್ರಭಾವ ಬೀರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !