November 10, 2026
Tuesday, November 10, 2026
spot_img

ರಾವಣನ ರಾಜವೈಭವಕ್ಕೆ 33 ಕೆ.ಜಿ. ತೂಕದ ವೇಷಭೂಷಣ:‘ರಾಮಾಯಣ’ದ ಮೇಕಿಂಗ್ ಹಿಂದಿದೆ ರೋಚಕ ಕಥೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ‘ರಾಮಾಯಣ’ದಲ್ಲಿ ರಾವಣನಾಗಿ ಕಾಣಿಸಿಕೊಂಡಿರುವ ನಟ ಯಶ್ ಅವರ ಲುಕ್ ವೈರಲ್ ಆಗಿದೆ. ಈ ಪಾತ್ರಕ್ಕೆ ಗಂಭೀರತೆ, ರಾಜವೈಭವ ಮತ್ತು ಯೋಧನ ಕಳೆ ನೀಡಲು ಚಿತ್ರತಂಡ ಸಾಕಷ್ಟು ಶ್ರಮಿಸಿದೆ. ವಿಶೇಷವೆಂದರೆ, ರಾವಣನ ಕೆಲವು ವೇಷಭೂಷಣಗಳ ತೂಕ ಬರೋಬ್ಬರಿ 33 ಕೆ.ಜಿ. ಇತ್ತು ಎಂಬ ಸಂಗತಿಯನ್ನು ಚಿತ್ರದ ವಸ್ತ್ರ ವಿನ್ಯಾಸಕಿ ಸಾನಿಯಾ ಸರ್ದಾರಿಯಾ ಬಹಿರಂಗಪಡಿಸಿದ್ದಾರೆ.

ವೇಷಭೂಷಣದ ತೂಕ ಕೇಳಿದರೆ ಶಾಕ್!

ಖಾಸಗಿ ಮಾಧ್ಯಮದ ಜೊತೆ ಮಾತನಾಡಿದ ಸಾನಿಯಾ, ಯಶ್ ಧರಿಸುತ್ತಿದ್ದ ಬಹುತೇಕ ವೇಷಭೂಷಣಗಳು ಆಭರಣ ಸೇರಿ 16ರಿಂದ 20 ಕೆ.ಜಿ. ತೂಕ ಹೊಂದಿದ್ದವು ಎಂದು ತಿಳಿಸಿದ್ದಾರೆ. ಲಂಕೆಯ ರಾಜನ ರೂಪ, ವಿವಾಹದ ಉಡುಗೆ ಸೇರಿದಂತೆ ಕೆಲವು ವಿಶೇಷ ವೇಷಗಳ ತೂಕ 30ರಿಂದ 33 ಕೆ.ಜಿ.ವರೆಗೆ ಇತ್ತು ಎಂದು ವಿವರಿಸಿದ್ದಾರೆ.

ರಾವಣನ ಕಿರೀಟ ತಯಾರಿಕೆಯೂ ಸುಲಭವಾಗಿರಲಿಲ್ಲ. ಹಲವು ಮಾದರಿಗಳನ್ನು ರೂಪಿಸಿ ತೂಕ ಕಡಿಮೆ ಮಾಡಲು ಪ್ರಯತ್ನಿಸಿದರೂ ಅಂತಿಮವಾಗಿ ಕಿರೀಟದ ತೂಕ 1.8 ಕೆ.ಜಿ. ಉಳಿದಿತ್ತು. ಆಭರಣಗಳ ತೂಕವೇ ಸುಮಾರು 6ರಿಂದ 7 ಕೆ.ಜಿ. ಆಗಿತ್ತು ಎಂದಿದ್ದಾರೆ.

ಇದನ್ನೂ ಓದಿ:

ರಾವಣನ ಲುಕ್ ಹಿಂದೆ ದೊಡ್ಡ ಸಂಶೋಧನೆ

ರಾವಣನನ್ನು ಕೇವಲ ಖಳನಾಯಕನಾಗಿ ತೋರಿಸದೆ, ಶಕ್ತಿಶಾಲಿ ರಾಜ ಮತ್ತು ಶಿವಭಕ್ತನ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವಂತೆ ವೇಷ ವಿನ್ಯಾಸ ಮಾಡಲಾಗಿದೆ. ಶಿವನಿಗೆ ಸಂಬಂಧಿಸಿದ ತ್ರಿಶೂಲ, ಸರ್ಪದ ಚಿತ್ರಣ ಹಾಗೂ ಶ್ರೀಲಂಕಾದ ವಾಸ್ತುಶಿಲ್ಪದ ಅಂಶಗಳನ್ನು ಆಭರಣ ಮತ್ತು ಕವಚಗಳಲ್ಲಿ ಅಳವಡಿಸಲಾಗಿದೆ.

ಯಶ್ ಕೂಡ ವಿನ್ಯಾಸದಲ್ಲಿ ಭಾಗಿ

ಸುಮಾರು 11 ವರ್ಷಗಳಿಂದ ಯಶ್ ಜೊತೆ ಕೆಲಸ ಮಾಡುತ್ತಿರುವ ಸಾನಿಯಾ, ನಟನೂ ವೇಷಭೂಷಣದ ವಿನ್ಯಾಸ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು ಎಂದು ಹೇಳಿದ್ದಾರೆ.

Must Read

Skip to toolbar