ಹೊಸದಿಗಂತ ಮಡಿಕೇರಿ:
ಕೊಡಗು ಜಿಲ್ಲೆಯ ಶನಿವಾರಸಂತೆ ಸಮೀಪದ ಜಾಗೇನಹಳ್ಳಿಯಲ್ಲಿ ಕಾಡುಕುರಿಯನ್ನು ಅಕ್ರಮವಾಗಿ ಬೇಟೆಯಾಡಿ, ಅದರ ಮಾಂಸ ತಯಾರಿಸುತ್ತಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಜಾಗೇನಹಳ್ಳಿ ನಿವಾಸಿ ಡಿ.ಎಸ್. ಸುರೇಶ್ ಎಂಬಾತ ತನ್ನ ಸಂಗಡಿಗರೊಂದಿಗೆ ಸೇರಿ ಪಕ್ಕದ ಅರಣ್ಯ ಪ್ರದೇಶದಲ್ಲಿ ಕಾಡುಕುರಿಯನ್ನು ಬೇಟೆಯಾಡಿದ್ದನು. ಬಳಿಕ ಅದನ್ನು ತನ್ನ ಮನೆಗೆ ತಂದು ಮಾಂಸವನ್ನಾಗಿ ಮಾಡುತ್ತಿದ್ದಾಗ, ಖಚಿತ ಮಾಹಿತಿ ಮೇರೆಗೆ ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಡಿ.ವಿ. ಪೂಜಾಶ್ರೀ ನೇತೃತ್ವದ ತಂಡ ದಾಳಿ ನಡೆಸಿದೆ.
ದಾಳಿಯ ವೇಳೆ ಆರೋಪಿ ಸುರೇಶ್‌ನನ್ನು ಬಂಧಿಸಿದ ಅಧಿಕಾರಿಗಳು, ಆತನಿಂದ ಕಾಡುಕುರಿಯ ಮಾಂಸ ಹಾಗೂ ಬೇಟೆಗೆ ಬಳಸಿದ್ದ ಬಂದೂಕನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತನನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದಾಳಿಯ ಸುಳಿವು ಸಿಗುತ್ತಿದ್ದಂತೆ ಸುರೇಶ್‌ನ ಇಬ್ಬರು ಸಹಚರರು ಸ್ಥಳದಿಂದ ಪರಾರಿಯಾಗಿದ್ದು, ಅವರಿಗಾಗಿ ಅರಣ್ಯ ಇಲಾಖೆ ಹುಡುಕಾಟ ನಡೆಸುತ್ತಿದೆ.
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಒ ವಿಕ್ರಮ್, ಗಸ್ತು ಅರಣ್ಯ ಪಾಲಕರಾದ ಭರಮಪ್ಪ, ಕರೇಪ್ಪ ಪೂಜಾರಿ ಹಾಗೂ ಸಿಬ್ಬಂದಿಗಳಾದ ಹರೀಶ್, ಆನಂದ, ನಾಗೇಶ್, ಗೋಪಿ, ಉಮೇಶ್ ಮತ್ತು ಚಂದನ್ ಪಾಲ್ಗೊಂಡಿದ್ದರು.



