ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಏಷ್ಯಾದಲ್ಲಿನ ಯುದ್ಧ ಮತ್ತು ಹಾರ್ಮುಜ್ ಜಲಸಂಧಿ ಮುಚ್ಚಿರುವ ಕಾರಣ, ಭಾರತದಲ್ಲಿ ಎಲ್‌ಪಿಜಿ ಪೂರೈಕೆಯ ಆತಂಕ ಹೆಚ್ಚಾಗಿದ್ದು, ಇದರ ನಡುವೆ ಗೃಹ ಬಳಕೆಯ ಎಲ್‌ಪಿಜಿ ವಿತರಣೆಯಲ್ಲಿ ಯಾವುದೇ ರೀತಿಯ ಅಡಚಣೆ ಉಂಟಾಗದಿದ್ದರೂ ದೇಶಾದ್ಯಂತ ಗ್ರಾಹಕರು ಮುಗಿಬಿದ್ದು ಬುಕಿಂಗ್ ಮಾಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗ್ರಾಹಕರಿಗೆ ಸ್ಪಷ್ಟನೆ ನೀಡಿದ್ದು, ಸಿಲಿಂಡರ್ ಸ್ಟಾಕ್ ಬೇಕಾದಷ್ಟು ಇರುವುದರಿಂದ ಯಾರೂ ಗೊಂದಲಕ್ಕೊಳಗಾಗಬೇಡಿ, ಚಿಂತಿತರಾಗಬೇಡಿ, ಆತುರದಿಂದ ಸಿಲಿಂಡರ್ ಬುಕ್ ಮಾಡಬೇಡಿ ಎಂದು ಸೂಚಿಸಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ (ಮಾರುಕಟ್ಟೆ ಮತ್ತು ತೈಲ ಸಂಸ್ಕರಣಾಗಾರ) ಸುಜಾತಾ ಶರ್ಮಾ ಅವರು ಮಾಹಿತಿ ನೀಡಿದ್ದು, ದೇಶೀಯ ಎಲ್‌ಪಿಜಿ ಉತ್ಪಾದನೆಯಲ್ಲಿ ಶೇ. 30ರಷ್ಟು ಏರಿಕೆಯಾಗಿದೆ , ಯಾವುದೇ ರೀತಿಯ ಭಯ ಬೇಡ ಎಂದು ಭರವಸೆ ನೀಡಿದೆ. ಗೃಹ ಬಳಕೆಯ ಎಲ್‌ಪಿಜಿ ಸರಬರಾಜು ಎಂದಿನಂತೆ ಸರಾಗವಾಗಿ ನಡೆಯುತ್ತಿದೆ . ಜತೆಗೆ ವದಂತಿಗೆ ಕಿವಿಗೊಡದಂತೆಯೂ ಮನವಿ ಮಾಡಿದೆ.
ಯುದ್ಧದ ಮೊದಲು, ಪ್ರತಿದಿನ ಸರಾಸರಿ 55.7 ಲಕ್ಷ ಸಿಲಿಂಡರ್‌ಗಳನ್ನು ಬುಕ್ ಮಾಡಲಾಗುತ್ತಿತ್ತು. ಪ್ರಸ್ತುತ, ಪ್ರತಿದಿನ ಸುಮಾರು 76 ಲಕ್ಷ ಗ್ಯಾಸ್ ಬುಕಿಂಗ್‌ಗಳನ್ನು ಮಾಡಲಾಗುತ್ತಿದೆ. ಯುದ್ಧದ ಪರಿಸ್ಥಿತಿಯ ನಡುವೆ ಎಲ್‌ಪಿಜಿ ಸಿಲಿಂಡರ್ ಬುಕಿಂಗ್‌ಗಳಲ್ಲಿ ಹಠಾತ್ ಹೆಚ್ಚಳ ಕಂಡುಬಂದಿದೆ. ಇದು ಸಾರ್ವಜನಿಕರಲ್ಲಿ ಭೀತಿ ಮೂಡಿಸಿದೆ. ಆದರೆ, ಪಸ್ತುತ ಇರುವ ಪರಿಸ್ಥಿತಿ ನಿಭಾಯಿಸಲು, ಎಲ್‌ಪಿಜಿ ವಿತರಕರ ಬಳಿ ಇನ್ನೂ ಅನಿಲ ದಾಸ್ತಾನು ಇದೆ ಎಂದು ಹೇಳಿದ್ದಾರೆ.
ದೇಶದಲ್ಲಿ ಒಟ್ಟು 25,605 LPG ವಿತರಣಾ ಕೇಂದ್ರಗಳ ಮೂಲಕ ನಿತ್ಯ 50 ಲಕ್ಷ ಸಿಲಿಂಡರ್ ವಿತರಣೆಯಾಗುತ್ತಿದೆ. ದೇಶದಲ್ಲಿ ಒಟ್ಟು 33.37 ಕೋಟಿ ಎಲ್‌ಪಿಜಿ ಗ್ರಾಹಕರಿದ್ದಾರೆ. ಈ ಪೈಕಿ 10.56 ಕೋಟಿ ಉಜ್ವಲ ಯೋಜನೆಯಡಿ ಫಲಾನುಭವಿಗಳು. ಗೃಹಬಳಕೆ ಮತ್ತು ಸಾರಿಗೆ ಗ್ರಾಹಕರಿಗೆ ಯಾವುದೇ ತೊಂದರೆ ಇಲ್ಲ. PNG, CNG ಗ್ರಾಹಕರಿಗೆ ಯಾವುದೇ ಕಡಿತವಿಲ್ಲದೆ ಶೇ.100ರಷ್ಟು ಸಿಲಿಂಡರ್ ಪೂರೈಕೆಯಾಗುತ್ತಿದೆ. ಚಹಾ ಉದ್ಯಮ ಮತ್ತು ಇತರ ಉತ್ಪಾದನಾ ಘಟಕಗಳಿಗೆ ಶೇ.80ರಷ್ಟು ಪೂರೈಕೆ ಮಾಡಲಾಗುತ್ತಿದೆ. ರಸಗೊಬ್ಬರದ ಕಾರ್ಖಾನೆಗಳಿಗೆ ಶೇ. 70ರಷ್ಟು ಪೂರೈಕೆಯಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕಚ್ಚಾ ತೈಲದ ವಿಷಯದಲ್ಲಿ ನಮ್ಮ ದೇಶದಲ್ಲಿ 258 ಮಿಲಿಯನ್ ಮೆಟ್ರಿಕ್ ಟನ್ ಸಂಸ್ಕರಣಾ ಸಾಮರ್ಥ್ಯವಿದೆ. ನಾವು ಪೆಟ್ರೋಲ್ ಮತ್ತು ಡೀಸೆಲ್ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಿದ್ದೇವೆ. ಆದ್ದರಿಂದ ದೇಶಕ್ಕೆ ಅದನ್ನು ಆಮದು ಮಾಡಿಕೊಳ್ಳುವ ಅಗತ್ಯವಿಲ್ಲ. ನಮ್ಮ ಎಲ್ಲಾ ಸಂಸ್ಕರಣಾಗಾರಗಳು ಶೇ. 100ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ.ದೆ. ಕಳೆದೆರಡು ವಾರಗಳಲ್ಲಿ ಎಲ್‌ಪಿಜಿ ಬುಕಿಂಗ್ ವಿನಂತಿಗಳು ಸುಮಾರು 10 ಪಟ್ಟು ಹೆಚ್ಚಾಗಿದೆ. ಬೇಡಿಕೆಯಲ್ಲಿ ಅಂತಹ ಹಠಾತ್ ಏರಿಕೆಯನ್ನು ನಿಭಾಯಿಸಲು ಸ್ವಲ್ಪ ಸಮಯ ಬೇಕಾಗಿದೆಯೇ ವಿನಃ ಸಂಗ್ರಹವಿಲ್ಲ ಎಂದು ಅರ್ಥವಲ್ಲ ಎಂದು ಸಚಿವಾಲಯ ಸ್ಪಷ್ಟನೆ ನೀಡಿದೆ.
ಕಚ್ಚಾ ತೈಲದ ಬಗ್ಗೆಯೂ ಚಿಂತಿಸುವ ಅಗತ್ಯವಿಲ್ಲ. ಭಾರತವು ಈಗ 40 ರಾಷ್ಟ್ರಗಳಿಂದ ಕಚ್ಚಾ ತೈಲವನ್ನು ಪಡೆಯುತ್ತಿರುವುದರಿಂದ, ಒಳಹರಿವು ದೈನಂದಿನ ಅಗತ್ಯವಾದ 550 ಕೋಟಿ ಬ್ಯಾರೆಲ್ ಮೀರುತ್ತಿದೆʼ ಎಂದು ಅವರು ತಿಳಿಸಿದ್ದಾರೆ.



