ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರುಣಾಚಲ ಪ್ರದೇಶದ ಕುರುಂಗ್ ಕುಮೇ ಜಿಲ್ಲೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಮೂವರು ಅಪ್ರಾಪ್ತ ವಯಸ್ಕರು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಬಾನೆತ್ತರಕ್ಕೆ ಚಿಮ್ಮಿದ ಜ್ವಾಲೆಯಿಂದಾಗಿ ಸುಮಾರು 30 ಅಂಗಡಿಗಳು ಮತ್ತು ಮನೆಗಳು ಸುಟ್ಟು ಭಸ್ಮವಾಗಿವೆ.
ಮೃತಪಟ್ಟ ನಾಲ್ವರೂ ಒಂದೇ ಕುಟುಂಬದವರಾಗಿದ್ದರು. ಪಾರ್ಸಿ ಪಾರ್ಲೋ ಪಟ್ಟಣದಲ್ಲಿ ಯಾವುದೇ ಅಗ್ನಿಶಾಮಕ ಠಾಣೆ ಅಥವಾ ವಾಹನಗಳು ಲಭ್ಯವಿರಲಿಲ್ಲ. ಹತ್ತಿರದ ಠಾಣೆಯಿಂದ ವಾಹನಗಳು ಬರುವಷ್ಟ್ರಲ್ಲಿ ತಡವಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಕುರುಂಗ್ ಕುಮೇ ಜಿಲ್ಲಾ ಕೇಂದ್ರವಾದ ಕಾಲೋರಿಯಾಂಗ್ನಿಂದ ವಾಹನಗಳು ಆಗಮಿಸುವ ಹೊತ್ತಿಗೆ ನಾಲ್ಕು ಗಂಟೆಗಳು ಕಳೆದಿತ್ತು ಎನ್ನಲಾಗಿದೆ.
ಮುಖ್ಯಮಂತ್ರಿ ಪೆಮಾ ಖಂಡು ಅವರು ಈ ದುರಂತ ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಶ್ರಮಿಸಿದ ಸ್ಥಳೀಯ ಆಡಳಿತದ ಅಧಿಕಾರಿಗಳು, ಸಾರ್ವಜನಿಕರು ಮತ್ತು ಪೊಲೀಸರ ಕಾರ್ಯವನ್ನು ಅವರು ಶ್ಲಾಘಿಸಿದ್ದಾರೆ. ಅಗ್ನಿ ಹೊತ್ತಿದ್ದು ಹೇಗೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಮೃತರ ದೇಹಗಳೆಲ್ಲವೂ ಗುರುತು ಸಿಗದಂತೆ ಸುಟ್ಟು ಕರಕಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.



