ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯ ಪ್ರಾಚ್ಯದಲ್ಲಿ ಉಂಟಾದ ಸಂಘರ್ಷದಿಂದಾಗಿ ಜಾಗತಿಕ ಇಂಧನ ಪೂರೈಕೆಯ ಮೇಲೆ ಒತ್ತಡ ಹೆಚ್ಚುತ್ತಿದ್ದು, ಇದರ ನಡುವೆ ಮಹಾರಾಷ್ಟ್ರ ಸರ್ಕಾರವು ಎಲ್‌ಪಿಜಿ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಈ ಕುರಿತು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ಸಂರಕ್ಷಣಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅನಿಲ್ ಡಿಗ್ಗಿಕರ್ ಮಾಹಿತಿ ನೀಡಿದ್ದು, ಮಾರ್ಚ್ ತಿಂಗಳಿನಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಲಭ್ಯತೆಯು ಕಳೆದ ಆರು ತಿಂಗಳ ಸರಾಸರಿಗಿಂತಲೂ ಹೆಚ್ಚಾಗಿದ್ದು, ಗ್ರಾಹಕರಿಗೆ ಯಾವುದೇ ಆತಂಕ ಬೇಡ ಎಂದು ತಿಳಿಸಿದ್ದಾರೆ.
ಸಿಲಿಂಡರ್‌ಗಳ ಸಂಗ್ರಹಣೆ, ಸಾಗಾಣಿಕೆ ಮತ್ತು ಗ್ರಾಹಕರಿಗೆ ವಿತರಣೆಯಾಗುವವರೆಗೆ ಪ್ರತಿ ಹಂತದಲ್ಲೂ ಪಾರದರ್ಶಕತೆ ಕಾಯ್ದುಕೊಳ್ಳಲು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.
ಎಲ್‌ಪಿಜಿ ಪೂರೈಕೆಯಲ್ಲಿ ಯಾವುದೇ ಅಡಚಣೆಗಳು ಆಗದಂತೆ ಜಿಲ್ಲಾಧಿಕಾರಿಗಳ ಅಡಿಯಲ್ಲಿ ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಲಾಗುವುದು. ಈ ಸಮಿತಿಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪೂರೈಕೆ ಅಧಿಕಾರಿ ಮತ್ತು ಸರ್ಕಾರಿ ತೈಲ ಕಂಪನಿಗಳ ಪ್ರತಿನಿಧಿಗಳು ಇರುತ್ತಾರೆ. ಎಲ್‌ಪಿಜಿ ಪೂರೈಕೆ ಸರಪಳಿಯನ್ನು ಮೇಲ್ವಿಚಾರಣೆ ಮಾಡುವುದು, ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವುದು ಮತ್ತು ದೈನಂದಿನ ಪರಿಸ್ಥಿತಿಗಳ ಬಗ್ಗೆ ವರದಿ ಸಲ್ಲಿಸುತ್ತಾರೆ ಎಂದು ತಿಳಿಸಿದ್ದಾರೆ.
ಎಲ್‌ಪಿಜಿ ಹಂಚಿಕೆಗೆ ಮೊದಲ ಆದ್ಯತೆಯಾಗಿ ಆಸ್ಪತ್ರೆಗಳು, ಸರ್ಕಾರಿ ಹಾಸ್ಟೆಲ್‌ಗಳು, ಶಾಲಾ ಮತ್ತು ಕಾಲೇಜು ಮೆಸ್‌ಗಳು, ಮಧ್ಯಾಹ್ನದ ಊಟದ ಅಡುಗೆಮನೆಗಳು ಮತ್ತು ಆಶ್ರಮ ಶಾಲೆಗಳಿಗೆ ನೀಡಲಾಗುತ್ತದೆ. ಜೊತೆಗೆ ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾನದಂಡಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಸೀಮೆಎಣ್ಣೆ ಅಥವಾ ಕಲ್ಲಿದ್ದಲಿನಂತಹ ಪರ್ಯಾಯ ಇಂಧನಗಳನ್ನು ಬಳಸಲು ಪ್ರೇರೇಪಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ ಎಲ್‌ಪಿಜಿ ಬಗ್ಗೆ ಹರಡುವ ವದಂತಿಗಳನ್ನು ತಡೆಗಟ್ಟುವ ಸಲುವಾಗಿ ರೇಡಿಯೋ, ಎಫ್‌ಎಂ ಚಾನೆಲ್‌ಗಳು, ಟಿವಿ ಮತ್ತು ಪತ್ರಿಕೆಗಳನ್ನು ಪ್ರತಿದಿನ ಪರಿಶೀಲನೆ ನಡೆಸಲಾಗುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಸುದ್ಧಿ ಮತ್ತು ದಾರಿತಪ್ಪಿಸುವ ಸಂದೇಶವನ್ನು ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರದ ಸರಾಸರಿ ಎಲ್‌ಪಿಜಿ ಬೇಡಿಕೆ ದಿನಕ್ಕೆ ಸುಮಾರು 9,000 ಮೆಟ್ರಿಕ್ ಟನ್ಗಳಿಷ್ಟಿದ್ದು, ಹೆಚ್ಚುತ್ತಿರುವ ಅವಶ್ಯಕತೆಯನ್ನು ಪೂರೈಸುವ ಸಲುವಾಗಿ ದಿನಕ್ಕೆ 11,000 ಮೆಟ್ರಿಕ್ ಟನ್ಗಳಿಗೆ ಹೆಚ್ಚಿಸಲಾಗಿದೆ. ಮನೆಗಳಿಗೆ ಪೈಪ್ಡ್ ನೈಸರ್ಗಿಕ ಅನಿಲದ ಸಾಕಷ್ಟು ದಾಸ್ತಾನು ಲಭ್ಯವಿದೆ ಎಂದು ಅವರು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.



