October 24, 2026
Saturday, October 24, 2026
spot_img

‘ಯಾರ ಶಾಂತಿಗಾಗಿ ನಾನು ಬಾಂಡ್ ನೀಡಬೇಕು?’: ಶಾಂತಿ ಬಾಂಡ್‌ಗೆ ನೆಹಾ ಬೋರಾ ವಿರೋಧ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಶಾಂತಿಯ ಹೆಸರಿನಲ್ಲಿ ಪ್ರತಿಭಟನಾಕಾರರ ಧ್ವನಿಯನ್ನು ನಿಯಂತ್ರಿಸಬಹುದೇ ಎಂಬ ಪ್ರಶ್ನೆಯನ್ನು ಅಖಿಲ ಭಾರತ ವಿದ್ಯಾರ್ಥಿ ಸಂಘದ (AISA) ಅಧ್ಯಕ್ಷೆ ನೆಹಾ ಬೋರಾ ಎತ್ತಿದ್ದಾರೆ. ದೆಹಲಿ ಪೊಲೀಸರ ಸೂಚನೆಯಂತೆ 10,000 ವೈಯಕ್ತಿಕ ಬಾಂಡ್ ಹಾಗೂ ಒಬ್ಬ ಜಾಮೀನುದಾರರನ್ನು ಒದಗಿಸುವುದಕ್ಕೆ ನಿರಾಕರಿಸಿರುವ ಅವರು, ನಾನು ಯಾರ ಶಾಂತಿಗಾಗಿ ನಾನು ಬಾಂಡ್ ನೀಡಬೇಕು?ಎಂದು ಪ್ರಶ್ನಿಸಿದ್ದಾರೆ. ಈ ಬೆಳವಣಿಗೆ ಶಾಂತಿಯುತ ಪ್ರತಿಭಟನೆ ಮತ್ತು ಭಿನ್ನಮತ ವ್ಯಕ್ತಪಡಿಸುವ ಹಕ್ಕಿನ ಕುರಿತು ಚರ್ಚೆಗೆ ಕಾರಣವಾಗಿದೆ.

ಅಕ್ಟೋಬರ್ 17ರಂದು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 126ರ ಅಡಿಯಲ್ಲಿ ಪೊಲೀಸರು ನೆಹಾ ಬೋರಾಗೆ ನೋಟಿಸ್ ನೀಡಿದ್ದರು. ವಿಚಾರಣೆ ಅವಧಿಯಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ಬಾಂಡ್ ನೀಡುವಂತೆ ಸೂಚಿಸಲಾಗಿತ್ತು. ಈ ನೋಟಿಸ್ ಪ್ರಶ್ನಿಸಿ ಅವರು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಅಕ್ಟೋಬರ್ 22ರಂದು ನ್ಯಾಯಾಲಯ ಅವರ ಅರ್ಜಿಯನ್ನು ವಜಾಗೊಳಿಸಿತು.

ಅಕ್ಟೋಬರ್ 28ಕ್ಕೆ ಮುಂದಿನ ವಿಚಾರಣೆ

ಹೈಕೋರ್ಟ್ ತೀರ್ಪಿನ ಬಳಿಕ ನೆಹಾ ಬೋರಾ ಮಂದಿರ್ ಮಾರ್ಗ್‌ನಲ್ಲಿರುವ ಉಪವಿಭಾಗೀಯ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರಾದರು. ನೋಟಿಸ್‌ಗೆ ಸಂಬಂಧಿಸಿದ ದಾಖಲೆಗಳನ್ನು ಅವರಿಗೆ ಒದಗಿಸಲಾಗಿದ್ದು, ಅಕ್ಟೋಬರ್ 28ರೊಳಗೆ ತಮ್ಮ ಉತ್ತರ ಸಲ್ಲಿಸಬೇಕಿದೆ. ಪ್ರಕರಣದ ಮುಂದಿನ ವಿಚಾರಣೆ ಕೂಡ ಅದೇ ದಿನ ನಡೆಯಲಿದೆ.

ಇದನ್ನೂ ಓದಿ:

ಪ್ರತಿಭಟನೆ ಪ್ರಜಾಪ್ರಭುತ್ವದ ಹಕ್ಕು

ಸಿಪಿಐ(ಎಂಎಲ್) ಲಿಬರೇಷನ್ ಸಂಸದೀಯ ಕಚೇರಿಯಲ್ಲಿ ಮಾತನಾಡಿದ ಬೋರಾ, ಬೀದಿಗಳಲ್ಲಿ ಶಾಂತಿಯುತವಾಗಿ ಪ್ರತಿಭಟಿಸುವುದು ಪ್ರಜಾಪ್ರಭುತ್ವದ ಹಕ್ಕು ಎಂದು ಹೇಳಿದರು. ಸರ್ಕಾರವನ್ನು ಪ್ರಶ್ನಿಸುವುದನ್ನೇ ಶಾಂತಿಗೆ ಧಕ್ಕೆ ಎಂದು ಪರಿಗಣಿಸುವುದು ಹೇಗೆ? ಎಂದು ಅವರು ಪ್ರಶ್ನಿಸಿದರು. ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವುದು ಮತ್ತು ಭಿನ್ನಮತ ವ್ಯಕ್ತಪಡಿಸುವುದು ಪ್ರಜಾಪ್ರಭುತ್ವದ ಮೂಲಭೂತ ಅಂಶಗಳೆಂದು ಪ್ರತಿಪಾದಿಸಿದರು.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧದ ಹೋರಾಟವನ್ನು ಉಲ್ಲೇಖಿಸಿದ ಅವರು, ಚುನಾವಣಾ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿನ ಅಕ್ರಮಗಳ ಆರೋಪಗಳ ಹಿನ್ನೆಲೆಯಲ್ಲಿ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿತ್ತು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ನಡೆದ ‘ಲಹರಾ ದೋ ತಿರಂಗಾ’ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು.

Must Read

Skip to toolbar