ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಯುಎಸ್-ಇಸ್ರೇಲ್ ದಾಳಿಗೆ ಇರಾನ್ ಅಕ್ಷರಶ ತತ್ತರಿಸಿದ್ದು, ಸರ್ವೋಚ್ಚ ನಾಯಕ ಆಯತೊಲ್ಲ ಅಲಿ ಖಮೇನಿ ಹತ್ಯೆಯಾಗಿದ್ದರು. ಇದೀಗ ಆ ಸ್ಥಾನಕ್ಕೆ ನೇಮಕಗೊಂಡಿದ್ದ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಕೂಡ ಸಾವನ್ನಪ್ಪಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಎನ್‌ಬಿಸಿ ನ್ಯೂಸ್ ಸಂಸ್ಥೆ ನಡೆಸಿದ ಫೋನ್ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ಆಯತೊಲ್ಲ ಅಲಿ ಖಮೇನಿ ಹತ್ಯೆ ಬಳಿಕ ನೂತನ ಸರ್ವೋಚ್ಚ ನಾಯಕನಾಗಿ ಆಯ್ಕೆಯಾದ ಮೊಜ್ತಬಾ ಎಲ್ಲೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ, ವಿಡಿಯೋ ಹೇಳಿಕೆ ಬಿಡುಗಡೆ ಮಾಡಿಲ್ಲ ಹೀಗಾಗಿ ಮೊಜ್ತಬಾ ಕೂಡ ದಾಳಿಯಲ್ಲಿ ಹತ್ಯೆಯಾಗಿರುವ ಅನುಮಾನ ಇದೆ ಎಂದು ಹೇಳಿದ್ದಾರೆ.
ನಮ್ಮ ದಾಳಿಯಲ್ಲಿ ಮೊಜ್ತಬಾ ಖಮೇನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೆ ಆ ಬಳಿಕ ಅವರ ಆರೋಗ್ಯದ ಕುರಿತು ಯಾವುದೇ ಮಾಹಿತಿ ಇಲ್ಲ.ಇರಾನ್ ಜನತೆಯೇ ಮೊಜ್ತಬಾ ಖಮೇನಿ ಎಲ್ಲಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ. ಆದ್ರೆ ನನ್ನ ಅನುಮಾನ ಮೊಜ್ತಬಾ ಖಮೇನಿ ಸಾವನ್ನಪ್ಪಿದ್ದಾರೆ. ಒಂದು ವೇಳೆ ಬದುಕಿದ್ದರೂ ಕೂಡ ನನ್ನ ಮುಂದೆ ಶರಣಾಗಲೇ ಬೇಕು ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಕೆಲ ದಿನಗಳ ಹಿಂದೆ ಮೊಜ್ತಬಾ ಖಮೇನಿ ಹೇಳಿಕೆ ಪ್ರಕಟಣೆಯೊಂದು ಬಿಡುಗಡೆಯಾಗಿತ್ತು.ಅದರಲ್ಲಿ ಅಮೆರಿಕ ಹಾಗೂ ಇಸ್ರೇಲ್‌ಗೆ ಎಚ್ಚರಿಕೆ ನೀಡಿದ್ದರು. ಅಮೆರಿಕಾ ಮೇಲೆ ಪ್ರತೀಕಾರ ಮುಂದುವರಿಯಲಿದೆ. ನಾವು ಇಂದಿಗೂ ಶರಣಾಗುವುದಿಲ್ಲ . ನಮ್ಮ ದಾಳಿ ಮುಂದುವರಿಯಲಿದ್ದು,ನಮ್ಮ ಉಳಿಯುವಿಕೆಗೆ ಅಮೆರಿಕಾ ಮೇಲೆ ದಾಳಿ ಅನಿವಾರ್ಯ ಎಂದು ಹೇಳಿದ್ದರು. ಅದಾದ ಬಳಿಕ ಇಲ್ಲಿವರೆಗೆ ಒಂದು ಹೇಳಿಕೆ, ವಿಡಿಯೋ ಸಂದೇಶ, ಆದೇಶ ಹೊರಬಿದ್ದಿಲ್ಲ.



