May 1, 2026
Friday, May 1, 2026
spot_img

ಪಲ್ಟಿಯಾದ ಗ್ಯಾಸ್ ಟ್ಯಾಂಕರ್ ನಲ್ಲಿ ಅನಿಲ ಸೋರಿಕೆ: ಮಂಗಳೂರು-ಉಡುಪಿ ಹೆದ್ದಾರಿಯಲ್ಲಿ ಬದಲಿ‌ಮಾರ್ಗ ಬಳಸಲು ಜಿಲ್ಲಾಡಳಿತ ಸೂಚನೆ

ಹೊಸದಿಗಂತ ಉಡುಪಿ:

ಕಟಪಾಡಿ ಜಂಕ್ಷನ್ ಬಳಿ ಪಲ್ಟಿಯಾಗಿರುವ ಮಂಗಳೂರಿನಿಂದ ಉಡುಪಿ ಕಡೆಗೆ ಎಲ್‌ಪಿಜಿ ಅನಿಲ ಸಾಗಿಸುತ್ತಿದ್ದ ಬುಲೆಟ್ ಟ್ಯಾಂಕರ್ ನಲ್ಲಿ ಅನಿಲ ಸೋರಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಹೆದ್ದಾರಿ ಸಂಚಾರ ಸ್ಥಗಿತಗೊಂಡಿದ್ದು ವಾಹನಗಳಿಗೆ ಉಡುಪಿ ಜಿಲ್ಲಾಧಿಕಾರಿ ಪರ್ಯಾಯ ಮಾರ್ಗ ಸೂಚಿಸಿ ಆದೇಶಿಸಿದ್ದಾರೆ.

ಇಂದು ಬೆಳಿಗ್ಗೆ ಕಟಪಾಡಿ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈ ಘಟನೆ ನಡೆದಿದ್ದು, ಟ್ಯಾಂಕರ್‌ನಿಂದ ಅನಿಲ ಸೋರಿಕೆ ಸ್ಥಳೀಯರಲ್ಲಿ ಭಾರೀ ಆತಂಕ ಮೂಡಿಸಿದೆ.

ಕಟಪಾಡಿ ಜಂಕ್ಷನ್‌ನಲ್ಲಿ ಅಂಡರ್‌ಪಾಸ್ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆಯನ್ನು ಡೈವರ್ಶನ್ ಮಾಡಲಾಗಿತ್ತು. ವೇಗವಾಗಿ ಬಂದ ಟ್ಯಾಂಕರ್ ಈ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ ಎನ್ನಲಾಗಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

​ರಕ್ಷಣಾ ಕಾರ್ಯಾಚರಣೆ:
ಘಟನಾ ಸ್ಥಳಕ್ಕೆ ಕೂಡಲೇ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಟ್ಯಾಂಕರ್‌ನಿಂದ ಅನಿಲ ಸೋರಿಕೆ ತಡೆಯಲು ಮತ್ತು ಉಷ್ಣಾಂಶ ಕಡಿಮೆ ಮಾಡಲು ನಿರಂತರವಾಗಿ ನೀರು ಹಾಯಿಸುತ್ತಿದ್ದಾರೆ.

ಮಂಗಳೂರಿನಿಂದ ತಜ್ಞರು ಮತ್ತು ಪರ್ಯಾಯ ಟ್ಯಾಂಕರ್ ಬಂದ ಬಳಿಕ ಅನಿಲ ಶಿಫ್ಟ್ ಮಾಡುವ ಪ್ರಕ್ರಿಯೆ ಆರಂಭವಾಗಲಿದೆ.

​ಜಿಲ್ಲಾಧಿಕಾರಿಗಳ ಆದೇಶ ಮತ್ತು ಬದಲಿ ಮಾರ್ಗದ ವಿವರ
​ಅಪಘಾತದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅವರು ಸಾರ್ವಜನಿಕ ಸುರಕ್ಷತೆಗಾಗಿ ಇಂದು (ಮಾ. 16) ರಾತ್ರಿ 8:00 ಗಂಟೆಯವರೆಗೆ ಜಾರಿಯಲ್ಲಿರುವಂತೆ ಸಂಚಾರ ಮಾರ್ಗ ಬದಲಾವಣೆ ಆದೇಶ ಹೊರಡಿಸಿದ್ದಾರೆ.

​ಮಂಗಳೂರಿನಿಂದ ಉಡುಪಿ ಕಡೆಗೆ: ವಾಹನಗಳು ಕಾಪುವಿನಿಂದ ಶಿರ್ವಾ – ಮೂಡುಬೆಳ್ಳೆ – ಮಣಿಪುರ ಮಾರ್ಗವಾಗಿ ಮಣಿಪಾಲಕ್ಕೆ ತೆರಳಿ ಅಲ್ಲಿಂದ ಉಡುಪಿ ತಲುಪುವುದು. ಅಥವಾ ಪಡುಬಿದ್ರೆ – ಬೆಳ್ಮಣ್ – ಶಿರ್ವಾ ಮಾರ್ಗವಾಗಿ ಮಣಿಪಾಲಕ್ಕೆ ತೆರಳಬಹುದು.

​ಉಡುಪಿಯಿಂದ ಮಂಗಳೂರು ಕಡೆಗೆ: ವಾಹನಗಳು ಮಣಿಪಾಲದಿಂದ ಮಣಿಪುರ – ಮೂಡುಬೆಳ್ಳೆ – ಶಿರ್ವಾ ಮಾರ್ಗವಾಗಿ ಕಾಪು ತಲುಪಿ ಮಂಗಳೂರಿಗೆ ಸಾಗುವುದು. ಅಥವಾ ಮಣಿಪಾಲ – ಶಿರ್ವಾ – ಬೆಳ್ಮಣ್ ಮಾರ್ಗವಾಗಿ ಪಡುಬಿದ್ರೆ ತಲುಪಬೇಕು ಎಂದು ಸೂಚಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !