June 17, 2026
Wednesday, June 17, 2026
spot_img

ಕಾಳಿ ನದಿ ಯೋಜನೆ ಜಾರಿಗೆ ಒತ್ತಾಯಿಸಿ ಮಾಡಿದ್ದ ಹಳಿಯಾಳ ಬಂದ್ ಯಶಸ್ವಿ

ಹೊಸದಿಗಂತ ವರದಿ ಹಳಿಯಾಳ :

ಕಾಳಿ ನದಿ ನೀರಾವರಿ ಯೋಜನೆ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ತ್ವರಿತವಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಸೋಮವಾರ ಕರೆ ನೀಡಲಾಗಿದ್ದ ಹಳಿಯಾಳ ಬಂದ್ ಯಶಸ್ವಿಯಾಯಿತು.

ಹಳಿಯಾಳದ ಎಲ್ಲಾ ವ್ಯಾಪಾರಸ್ಥರ ಸಂಘಗಳು, ಸಂಘ ಸಂಸ್ಥೆಗಳು , ಹಿರಿಯ ನಾಗರೀಕ ಸಂಘಟನೆ, ಕನ್ನಡ ಹೋರಾಟ ಸಂಘಟನೆಗಳು, ಹೊಟೇಲ್ ಮತ್ತು ಬಾರ್ ಅಸೋಸಿಯೇಷನ್ ನ ಸದಸ್ಯರು ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿದ ಕಾರಣ ಸಂಪೂರ್ಣ ಹಳಿಯಾಳ ಸ್ಥಬ್ಧಗೊಂಡಿತ್ತು.

ರೈತರು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ರೈತರು ಘೋಷಣೆ ಕೂಗಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಸರ್ಕಾರದ ಗಮನ ಸೆಳೆದರು. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಯಿತು.

ರೈತ ಮುಖಂಡ ಸಂದೀಪ ಕುಮಾರ ಬೊಬಾಟಿ ಮತ್ತಿತರರು ನೇರವಾಗಿ ಶಾಸಕರಿಗೆ ರಾಜಿನಾಮೆ ನೀಡಲು ಒತ್ತಾಯಿಸಿದರಲ್ಲದೇ ಕಾಳಿ ನದಿ ನೀರು ಯೋಜನೆ ಹಾಗೂ ಸಮಗ್ರ ಏತ ನೀರಾವರಿ ಯೋಜನೆ ಜಾರಿಗೆ ರೈತ ಮುಖಂಡರಾದ ನಾಗೇಂದ್ರ ಜಿವೋಜಿ ರವರನ್ನು ದೇಣಿಗೆ ಎತ್ತಿಯಾದರೂ ಗೆಲ್ಲಿಸಿ ತಂದು ಯೋಜನೆ ಜಾರಿ ಮಾಡಿ ತೋರಿಸುವುದಾಗಿ ಸವಾಲ್ ಹಾಕಿದರು.

ಪ್ರತಿಭಟನೆ ನಡೆಯುತ್ತಿರುವ ಮಾಹಿತಿ ತಿಳಿದ ತಕ್ಷಣ ತಾಲೂಕು ಆಡಳಿತ ಹಾಗೂ ಕೆಸಿಎನ್‌ಎಲ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರೈತ ಮುಖಂಡರೊಂದಿಗೆ ಮಾತುಕತೆ ನಡೆಸಿ ಏಪ್ರಿಲ್ ೨ರೊಳಗೆ ಕಾಳಿ ನದಿಯಿಂದ ೧೯ ಬಾಂದಾರುಗಳಿಗೆ ಮತ್ತು ೪೬ ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ರೈತ ಮುಖಂಡರು ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆಯಲು ಒಪ್ಪಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !