August 7, 2026
Friday, August 7, 2026
spot_img

ಪ್ರಯಾಣಿಕರ ಗಮನಕ್ಕೆ: ಭಾನುವಾರ ಬೆಳಗ್ಗೆ ಈ ಮಾರ್ಗದಲ್ಲಿ ಓಡಲ್ಲ ನಮ್ಮ ಮೆಟ್ರೋ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾನುವಾರದ ಬೆಳಗ್ಗೆ ಮೆಟ್ರೋದಲ್ಲಿ ಪ್ರಯಾಣ ಮಾಡುವ ಯೋಜನೆ ಇದ್ಯಾ? ಹಾಗಾದರೆ ಈ ಮಾಹಿತಿ ತಪ್ಪದೇ ತಿಳಿದುಕೊಳ್ಳಿ. ಅಗತ್ಯ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಆಗಸ್ಟ್‌ 9ರಂದು ನೇರಳೆ ಮಾರ್ಗದ ಕೆಲವು ಭಾಗಗಳಲ್ಲಿ ಮೆಟ್ರೋ ರೈಲು ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಪ್ರಯಾಣಿಕರು ಮುಂಚಿತವಾಗಿ ತಮ್ಮ ಪ್ರಯಾಣದ ವೇಳಾಪಟ್ಟಿಯನ್ನು ರೂಪಿಸಿಕೊಳ್ಳುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮನವಿ ಮಾಡಿದೆ.

ಬೆಳಗ್ಗೆ 7ರಿಂದ 9ರವರೆಗೆ ಸೇವೆ ಸ್ಥಗಿತ

ಬಿಎಂಆರ್‌ಸಿಎಲ್ ಪ್ರಕಟಣೆಯ ಪ್ರಕಾರ, ಸ್ವಾಮಿ ವಿವೇಕಾನಂದ ರಸ್ತೆ ಮತ್ತು ಇಂದಿರಾನಗರ ಮೆಟ್ರೋ ನಿಲ್ದಾಣಗಳ ನಡುವಿನ ಅಗತ್ಯ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಆಗಸ್ಟ್‌ 9ರಂದು ಬೆಳಗ್ಗೆ 7ರಿಂದ 9 ಗಂಟೆಯವರೆಗೆ ಬೈಯಪ್ಪನಹಳ್ಳಿ ಮತ್ತು ಎಂ.ಜಿ. ರಸ್ತೆ ನಡುವಿನ ಮೆಟ್ರೋ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ.

ಈ ನಿಲ್ದಾಣಗಳಲ್ಲಿ ಮೆಟ್ರೋ ಸಂಚಾರ ಇರುವುದಿಲ್ಲ

ಈ ಅವಧಿಯಲ್ಲಿ ಬೈಯಪ್ಪನಹಳ್ಳಿ, ಸ್ವಾಮಿ ವಿವೇಕಾನಂದ ರಸ್ತೆ, ಇಂದಿರಾನಗರ, ಹಲಸೂರು, ಟ್ರಿನಿಟಿ ಹಾಗೂ ಎಂ.ಜಿ. ರಸ್ತೆ ನಡುವಿನ ನೇರಳೆ ಮಾರ್ಗದಲ್ಲಿ ಮೆಟ್ರೋ ಸೇವೆ ಲಭ್ಯವಿರುವುದಿಲ್ಲ. ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಪ್ರಯಾಣಿಸಲು ಸೂಚಿಸಲಾಗಿದೆ.

ಇತರೆ ಮಾರ್ಗಗಳಲ್ಲಿ ಎಂದಿನಂತೆ ಸೇವೆ

ಆದರೆ ಉಳಿದ ಮಾರ್ಗಗಳಲ್ಲಿ ಮೆಟ್ರೋ ಸೇವೆ ಎಂದಿನ ವೇಳಾಪಟ್ಟಿಯಂತೆ ಮುಂದುವರಿಯಲಿದೆ. ಚಲ್ಲಘಟ್ಟದಿಂದ ಎಂ.ಜಿ. ರಸ್ತೆ, ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್ (ಕಾಡುಗೋಡಿ), ಮಾದಾವರದಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್ ಹಾಗೂ ಆರ್‌.ವಿ. ರಸ್ತೆ–ಬೊಮ್ಮಸಂದ್ರ ಮಾರ್ಗಗಳಲ್ಲಿ ರೈಲು ಸಂಚಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

9 ಗಂಟೆಯ ಬಳಿಕ ಪುನರಾರಂಭ

ನಿರ್ವಹಣಾ ಕಾಮಗಾರಿ ಪೂರ್ಣಗೊಂಡ ಬಳಿಕ ಬೆಳಗ್ಗೆ 9 ಗಂಟೆಯಿಂದ ಸಂಪೂರ್ಣ ನೇರಳೆ ಮಾರ್ಗದಲ್ಲಿ ಮೆಟ್ರೋ ಸೇವೆ ಮತ್ತೆ ಎಂದಿನಂತೆ ಆರಂಭವಾಗಲಿದೆ. ಪ್ರಯಾಣಿಕರು ತಾತ್ಕಾಲಿಕ ಸೇವಾ ವ್ಯತ್ಯಯವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಳ್ಳುವಂತೆ ಬಿಎಂಆರ್‌ಸಿಎಲ್ ಮನವಿ ಮಾಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !