ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರ, ಜೋಗಿ ಪ್ರೇಮ್ ನಿರ್ದೇಶನದ ಹಾಗೂ ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದ ಜನಪ್ರಿಯ ಹಾಡು ‘ಸರ್ಸೆ ಸರ್ಸೆ ನಿನ್ನ ಸೆರಗಾ ಸರ್ಸೆ’ ವಿವಾದದ ಸುಳಿಗೆ ಸಿಲುಕಿದ್ದು, ಕೇಂದ್ರ ಸರ್ಕಾರ ಈ ಹಾಡನ್ನು ನಿಷೇಧಿಸಿದೆ.
ಲೋಕಸಭೆಯಲ್ಲಿ ಈ ವಿಷಯದ ಬಗ್ಗೆ ಮಾತನಾಡಿದ ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್, ಈ ಹಾಡಿನ ವಿರುದ್ಧ ಈಗಾಗಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
“ಭಾರತದಲ್ಲಿ ಪ್ರತಿಯೊಬ್ಬರಿಗೂ ವಾಕ್ ಸ್ವಾತಂತ್ರ್ಯವಿದೆ ನಿಜ, ಆದರೆ ಅದು ಸಂವಿಧಾನ ರೂಪಿಸಿರುವ ಮಿತಿಗಳಿಗೆ ಒಳಪಟ್ಟಿರುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯವು ಸಮಾಜದ ಹಿತದೃಷ್ಟಿಯಿಂದ ಹೇರಲಾದ ಸಮಂಜಸವಾದ ನಿರ್ಬಂಧಗಳ ವ್ಯಾಪ್ತಿಯಲ್ಲೇ ಇರಬೇಕು. ಯಾವುದೇ ಕೃತಿ ಅಥವಾ ಹಾಡು ಈ ಚೌಕಟ್ಟನ್ನು ಮೀರಿದಾಗ ಸರ್ಕಾರ ಸುಮ್ಮನಿರಲು ಸಾಧ್ಯವಿಲ್ಲ,” ಎಂದು ಸಚಿವರು ಸದನದಲ್ಲಿ ತಿಳಿಸಿದರು.
ಈ ಹಾಡಿನಲ್ಲಿರುವ ಸಾಹಿತ್ಯ ಅಥವಾ ದೃಶ್ಯಗಳು ಸಾಮಾಜಿಕ ಮತ್ತು ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸಿವೆ ಎಂಬ ಕಾರಣಕ್ಕೆ ಈ ಕ್ರಮ ಜರುಗಿಸಲಾಗಿದೆ ಎಂದು ತಿಳಿದುಬಂದಿದೆ. ಚಿತ್ರತಂಡದ ಮುಂದಿನ ನಡೆ ಏನು ಎಂಬುದು ಈಗ ಕುತೂಹಲ ಮೂಡಿಸಿದೆ.



