March 18, 2026
Wednesday, March 18, 2026
spot_img

ಮೂರು ತಿಂಗಳ ಹುಡುಕಾಟದ ಬಳಿಕ ‘ನ್ಯಾಯ ಪಂಚಾಯಿತಿ’ಯಲ್ಲೇ ನಡೀತು ಭೀಕರ ಕೊ*ಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಪತಿ ಹಾಗೂ ಆತನ ಸ್ನೇಹಿತರು ಸೇರಿ ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

23 ವರ್ಷದ ವಿಜಯಕುಮಾರ್ ಕೊಲೆಯಾದ ದುರ್ದೈವಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಪನೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೃತ ವಿಜಯಕುಮಾರ್ ಹಾಗೂ ಪ್ರಮುಖ ಆರೋಪಿ ಪ್ರಸಾದ್‌ನ ಪತ್ನಿ ನಡುವೆ ಅನೈತಿಕ ಸಂಬಂಧವಿತ್ತು ಎನ್ನಲಾಗಿದೆ. ಈ ಹಿಂದೆ ವಿಜಯಕುಮಾರ್ ಪ್ರಸಾದ್‌ನ ಪತ್ನಿಯನ್ನೇ ಕರೆದುಕೊಂಡು ಹೋಗಿದ್ದನು. ಇದರಿಂದ ಕೆರಳಿದ್ದ ಪ್ರಸಾದ್, ಹೇಗಾದರೂ ಮಾಡಿ ವಿಜಯಕುಮಾರ್‌ನನ್ನು ಹತ್ಯೆ ಮಾಡಬೇಕೆಂದು ಹಠಕ್ಕೆ ಬಿದ್ದಿದ್ದನು.

ಕಳೆದ ಮೂರು ತಿಂಗಳಿನಿಂದ ಆರೋಪಿಗಳಾದ ಪ್ರಸಾದ್, ಮಲ್ಲೇಶ್ ಮತ್ತು ಅಮರೇಶ್ ವಿಜಯಕುಮಾರ್‌ಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದರು. ಈ ನಡುವೆ ಬಳ್ಳಾಪುರ ಗ್ರಾಮದಲ್ಲಿ ಜಾಗದ ವಿಷಯಕ್ಕೆ ಸಂಬಂಧಿಸಿದಂತೆ ನಡೆಯುತ್ತಿದ್ದ ‘ನ್ಯಾಯ ಪಂಚಾಯಿತಿ’ಯಲ್ಲಿ ವಿಜಯಕುಮಾರ್ ಭಾಗವಹಿಸುತ್ತಿರುವ ಬಗ್ಗೆ ಆರೋಪಿಗಳಿಗೆ ಖಚಿತ ಮಾಹಿತಿ ಸಿಕ್ಕಿತ್ತು.

ಸಿಕ್ಕಿದ್ದೇ ಸವಲತ್ತು ಎಂದು ಪಂಚಾಯಿತಿ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಿದ ಆರೋಪಿಗಳು, ವಿಜಯಕುಮಾರ್ ತಲೆಗೆ ಕೊಡಲಿಯಿಂದ ಬಲವಾಗಿ ಏಟು ನೀಡಿದ್ದಾರೆ. ತೀವ್ರ ರಕ್ತಸ್ರಾವದಿಂದ ಗಂಭೀರ ಗಾಯಗೊಂಡಿದ್ದ ಯುವಕನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ವಿಜಯಕುಮಾರ್ ಮೃತಪಟ್ಟಿದ್ದಾನೆ.

ಈ ಘಟನೆ ಕುರಿತು ಮೃತನ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆ ನಡೆಸಿದ ಪೊಲೀಸರು ಪ್ರಸಾದ್ ಮತ್ತು ಮಲ್ಲೇಶ್‌ನನ್ನು ಬಂಧಿಸಿದ್ದು, ಇನ್ನೊಬ್ಬ ಆರೋಪಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ. ಬಂಧಿತ ಆರೋಪಿಗಳನ್ನು ಸದ್ಯ ವಿಚಾರಣೆಗೊಳಪಡಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !