ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಠ್ಮಂಡುವಿನಿಂದ ಖೋಟಾಂಗ್ ಜಿಲ್ಲೆಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾದ ಘಟನೆ ನೇಪಾಳದಲ್ಲಿ ನಡೆದಿದೆ. ಕೃಷಿಭೂಮಿಯಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದ ವೇಳೆ ಚಾಪರ್ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತದ ಭೀಕರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಗುಡ್ಡಗಾಡು ಪ್ರದೇಶದಲ್ಲಿ ಇಳಿಯುವಾಗ ಹೆಲಿಕಾಪ್ಟರ್ ಅಚಾನಕ್ ಪತನಗೊಂಡು ಅದರ ಬಾಲದ ಭಾಗ ಪರ್ವತಕ್ಕೆ ಅಪ್ಪಳಿಸಿದ ದೃಶ್ಯ ಕಾಣಿಸುತ್ತದೆ. ಪತನದ ಪರಿಣಾಮ ಹೆಲಿಕಾಪ್ಟರ್ ಸಂಪೂರ್ಣ ಹಾನಿಗೊಳಗಾಗಿದೆ.
ಇದನ್ನೂ ಓದಿ:
ಪ್ರಾಥಮಿಕ ಮಾಹಿತಿಯ ಪ್ರಕಾರ, ತೀವ್ರ ಗಾಳಿ ಅಥವಾ ಲ್ಯಾಂಡಿಂಗ್ ಸಮಯದಲ್ಲಿ ಎದ್ದ ಧೂಳು ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಮೃತದೇಹವನ್ನು ಸಾಗಿಸುತ್ತಿದ್ದ ಈ ಹೆಲಿಕಾಪ್ಟರ್‌ನಲ್ಲಿ ಐದು ಪ್ರಯಾಣಿಕರಿದ್ದು, ಒಬ್ಬರಿಗೆ ಮಾತ್ರ ಸಣ್ಣ ಗಾಯವಾಗಿದೆ. ಪೈಲಟ್ ಸೇರಿದಂತೆ ಉಳಿದವರು ಸುರಕ್ಷಿತರಾಗಿದ್ದಾರೆ.
ಖೋಟಾಂಗ್ ಜಿಲ್ಲೆನಲ್ಲಿ ಬೆಳಿಗ್ಗೆ ನಡೆದ ಈ ಘಟನೆಯ ಬಳಿಕ ಗಾಯಗೊಂಡವರನ್ನು ಮತ್ತೊಂದು ಹೆಲಿಕಾಪ್ಟರ್ ಮೂಲಕ ಕಠ್ಮಂಡುವಿಗೆ ಸ್ಥಳಾಂತರಿಸಲಾಗಿದೆ. ಘಟನೆ ಕುರಿತು ನಾಗರಿಕ ವಿಮಾನಯಾನ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.



