ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾನೊಬ್ಬ ಅನಾಥ, ನನ್ನ ಮದುವೆಗೆ ಬರ್ತೀರಾ? ಎಂದು ಸಾಮಾಜಿಕ ಜಾಲತಾಣದಲ್ಲಿ ಯುವಕನೊಬ್ಬ ಆಮಂತ್ರಣ ನೀಡಿದ್ದು, ಆತನ ಮದುವೆಗೆ ಸಾವಿರಾರು ಮಂದಿ ಆಗಮಿಸಿ ಶುಭ ಕೋರಿದ್ದಾರೆ. ದುಬಾರಿ ಉಡುಗೊರೆಗಳನ್ನು ನೀಡಿ ನೀನು ಅನಾಥ ಅಲ್ಲ ಎಂದು ಕೂಗಿ ಹೇಳಿದ್ದಾರೆ.
ಚೀನಾದ ಷು ಚೆಂಗ್ಹಾಂಗ್ ತಮ್ಮ ಜೀವನದ ಸ್ಟೋರಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ನನ್ನ ಕಡೆಯವರು ಎಂದು ಯಾರೂ ಇಲ್ಲ. ನೀವೆಲ್ಲಾ ಬರುತ್ತೀರಾ ಎಂದು ಕೇಳಿದ್ದಾರೆ. ಇದಕ್ಕೆ ಆತನಿಗೆ ಅತ್ಯುತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಜನರು ಮದುವೆಗೆ ಆಗಮಿಸಿದ್ದಾರೆ. ಅಷ್ಟೇ ಅಲ್ಲದೇ ಜನರೆಲ್ಲ ದುಡ್ಡು ಹಾಕಿ ಒಂದು ಕಾರನ್ನು ಕೂಡ ಗಿಫ್ಟ್ ನೀಡಿದ್ದಾರೆ.
ಯುವಕನ ಕಥೆ ಏನು?
ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಷು ಚೆಂಗ್ಹಾಂಗ್ಗೆ ದಿಕ್ಕೇ ತೋಚದಂತಾಗಿತ್ತು. ಮಕ್ಕಳಿಗೆ ಆಸರೆಯಾಗಲು ತಾಯಿ ಮರುಮದುವೆ ಆದರು. ಆದರೆ ಮಲತಂದೆಯ ಪ್ರೀತಿ ಸಿಗದೇ ಷು ಚೆಂಗ್ಹಾಂಗ್ ಹಾಗೂ ಆತನ ಸಹೋದರ ದೂರವಾಗಿ ಬೆಳೆದರು. ಹಲವು ಕಷ್ಟಗಳನ್ನು ಎದುರಿಸಿ ಇಬ್ಬರು ಸಹೋದರರು ಓದಿ ಕೆಲಸಕ್ಕೆ ಸೇರಿದರು. ಪ್ರೀತಿಸಿ ಮದುವೆಯಾಗುತ್ತಿರುವ ವರ ವರ್ಷಗಳಿಂದ ಮದುವೆಗಾಗಿ ಹಣ ಕೂಡಿಟ್ಟಿದ್ದರು. ಮದುವೆಯ ಆಮಂತ್ರಣ ಪತ್ರಿಕೆ ಬರೆಸುವಾಗ, ನಾನು ಯಾರಿಗಾಗಿ ಇದನ್ನು ಮಾಡಬೇಕು ಎನ್ನುವ ಪ್ರಶ್ನೆ ಅವರಲ್ಲಿ ಕಾಡಿತ್ತು. ಮನೆಯವರಿಲ್ಲ, ನೆಂಟರಿಲ್ಲ ಎನ್ನುವ ಬೇಸರವಿತ್ತು. ಹೀಗಾಗಿ ಆತ ಸಾಮಾಜಿಕ ಜಾಲತಾಣದ ಮೊರೆ ಹೋಗಬೇಕಾಯಿತು.
ಭಾವನಾತ್ಮಕವಾಗಿ ಸ್ಪಂದಿಸಿದ ನೆಟ್ಟಿಗರು
ತನ್ನ ಜೀವನದ ಕಥೆಯನ್ನು ಹೇಳಿಕೊಂಡು ಮದುವೆಗೆ ಎಲ್ಲರಿಗೂ ಮುಕ್ತ ಆಹ್ವಾನವಿದೆ ಎಂದು ಷು ಚೆಂಗ್ಹಾಂಗ್ ಪೋಸ್ಟ್ ಮಾಡುತ್ತಲೇ ಅವರಿಗೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಮದುವೆಗೆ ಬರುತ್ತೇವೆ ಎಂದು ಹಲವರು ಕಮೆಂಟ್ ಬಾಕ್ಸ್ನಲ್ಲಿ ಹೇಳಿ. ಆತನ ನಂಬರ್ ಪಡೆದು ಮದುವೆಯ ಕೆಲಸಗಳಿಗೂ ನೆರವಾಗಿದ್ದಾರೆ. ಮದುವೆಗೆ ಬಂದ ಅಪರಿಚಿತರು, ಅಡುಗೆ ಮಾಡಲು, ಡೆಕೋರೇಟ್ ಮಾಡಲು, ಮದುವೆ ಮನೆಯ ಎಲ್ಲ ಕೆಲಸಗಳನ್ನು ಮಾಡಿಕೊಟ್ಟಿದ್ದಾರೆ. ಮದುವೆಗೆ ಬಂದ ಅಪರಿಚಿತರೆಲ್ಲರೂ ಹಣ ಹೂಡಿ ಒಂದು ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ.
ಜನರಿಗಾಗಿ ಜಾಗ ಬದಲಾವಣೆ
ಮದುವೆಯ ಲೊಕೇಷನ್ ಚಿಕ್ಕದಾಗಿತ್ತು. ಹೆಚ್ಚು ಜನ ಬರೋದಿಲ್ಲ ಎಂದು ತಿಳಿದುಕೊಂಡಿದ್ದ ವರ ಸಣ್ಣ ಚತ್ರದಲ್ಲಿ ಮದುವೆಗೆ ತಯಾರಾಗಿದ್ದರು. ಆದರೆ ಸಾಮಾಜಿಕ ಜಾಲತಾಣದಲ್ಲಿ ಬಂದ ರೆಸ್ಪಾನ್ಸ್ನಿಂದ ಮದುವೆಯನ್ನು ದೊಡ್ಡ ಸ್ಥಳಕ್ಕೆ ಬದಲಾವಣೆ ಮಾಡಲಾಯಿತು. ಅತಿಥಿಗಳು ಆಹಾರ ಸಾಮಗ್ರಿ, ಗೃಹೋಪಯೋಗಿ ವಸ್ತುಗಳು ಸೇರಿದಂತೆ ಹಲವು ಉಡುಗೊರೆಗಳನ್ನು ತಂದಿದ್ದರು. ಕೆಲವು ವರದಿಗಳ ಪ್ರಕಾರ, ಮದುವೆಗೆ ಬಂದವರು ಪ್ರಾಣಿಗಳನ್ನೂ ಉಡುಗೊರೆಯಾಗಿ ನೀಡಿದ್ದಾರೆ. ಮತ್ತೊಂದೆಡೆ, ವಧುವಿನ ತಂದೆ ವರದಕ್ಷಿಣೆಯಾಗಿ ನೀಡಿದ್ದ 1.28 ಲಕ್ಷ ಯುವಾನ್ ಹಣವನ್ನು ದಂಪತಿಗೆ ಮರಳಿಸಿ, ಹೊಸ ಜೀವನ ಕಟ್ಟಿಕೊಳ್ಳಲು ಅದನ್ನು ಬಳಸಿಕೊಳ್ಳುವಂತೆ ಹೇಳಿದ್ದಾರೆ ಎಂದು ವರದಿಯಾಗಿದೆ.



