ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಎಲ್‌ಪಿಜಿ ಕೊರತೆಯ ಪರಿಣಾಮ ವಿಧಾನ ಪರಿಷತ್ತಿನಲ್ಲೂ ಕೇಳಿಬಂದಿದೆ. ಉಪಹಾರಕ್ಕೆ ಇಡ್ಲಿ, ದೋಸೆ ಸಿಗದಿರುವ ವಿಚಾರವನ್ನು ಕಾಂಗ್ರೆಸ್ ಸದಸ್ಯ ಐವನ್ ಡಿಸೋಜಾ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದರು.
ಕಲಾಪ ಆರಂಭವಾಗುತ್ತಿದ್ದಂತೆಯೇ ಮಾತನಾಡಿದ ಅವರು, ಶಾಸಕರ ಭವನದಲ್ಲಿಯೇ ತಿಂಡಿ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. “ಶಾಸಕರಿಗೇ ಇಂತಹ ಸ್ಥಿತಿ ಇದ್ದರೆ ಜನರ ಪರಿಸ್ಥಿತಿ ಹೇಗಿರಬಹುದು?” ಎಂದು ಪ್ರಶ್ನಿಸಿ, ಸಮಸ್ಯೆ ಯಾವಾಗ ಪರಿಹಾರವಾಗಲಿದೆ ಎಂದು ಸರ್ಕಾರದಿಂದ ಸ್ಪಷ್ಟನೆ ಕೇಳಿದರು.
ಇದನ್ನೂ ಓದಿ:
ಈ ವೇಳೆ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕೂಡ ಸದಸ್ಯರು ಇಡ್ಲಿ, ವಡೆ ಸಿಗುತ್ತಿಲ್ಲ ಎಂದು ದೂರುತ್ತಿದ್ದಾರೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಜಮೀರ್ ಅಹಮದ್, ತಿಂಡಿ ಸಮಸ್ಯೆಗೆ ಗ್ಯಾಸ್ ಕೊರತೆಯೇ ಮುಖ್ಯ ಕಾರಣ ಎಂದು ಸ್ಪಷ್ಟಪಡಿಸಿದರು.
ಸಭಾಪತಿ ಬಸವರಾಜ ಹೊರಟ್ಟಿ ಹಾಸ್ಯಭರಿತವಾಗಿ “10 ನಿಮಿಷ ಸಮಯ ಕೊಡುತ್ತೇನೆ, ತಿಂಡಿ ತಿಂದು ಬನ್ನಿ” ಎಂದು ಹೇಳಿ ಸದನದಲ್ಲಿ ನಗೆ ಮೂಡಿಸಿದರು. ಆದರೆ ಈ ಘಟನೆ ರಾಜ್ಯದ ಗ್ಯಾಸ್ ಕೊರತೆ ಸಮಸ್ಯೆಯ ಗಂಭೀರತೆಯನ್ನು ತೋರಿಸಿದೆ.



