ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆ ಮತ್ತು ಸಂಪುಟ ಪುನಾರಚನೆಯ ಚರ್ಚೆಗಳು ಮತ್ತೆ ಜೋರಾಗಿವೆ. “ಕರ್ನಾಟಕದಲ್ಲಿ ಪ್ರಭಾವಿ ಸಿಎಂ ಇದ್ದಾರೆ, ಸದ್ಯಕ್ಕೆ ಸಿಎಂ ಹುದ್ದೆ ಖಾಲಿ ಇಲ್ಲ” ಎಂಬ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಹೇಳಿಕೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅತ್ಯಂತ ಚತುರತೆಯಿಂದ ಪ್ರತಿಕ್ರಿಯೆ ನೀಡಿದ್ದಾರೆ.
“ವೇಣುಗೋಪಾಲ್ ಅವರ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ಪಕ್ಷ ಮತ್ತು ಶಾಸಕರು ಅಂತಿಮ ತೀರ್ಮಾನ ಮಾಡುತ್ತಾರೆ ಎಂದು ಅವರೇ ತಿಳಿಸಿದ್ದಾರೆ” ಎನ್ನುವ ಮೂಲಕ ಹೈಕಮಾಂಡ್ ನಿರ್ಧಾರಕ್ಕೆ ಎಲ್ಲವೂ ಮುಕ್ತವಾಗಿದೆ ಎಂಬ ಸಂದೇಶ ರವಾನಿಸಿದರು.
ಎಲ್ಲಕ್ಕಿಂತ ಮುಖ್ಯವಾಗಿ, ಮುಂದಿನ ದಿನಗಳಲ್ಲಿ ನಡೆಯುವುದು “ಸಂಪುಟ ಪುನಾರಚನೆಯೋ ಅಥವಾ ಅಧಿಕಾರ ಹಸ್ತಾಂತರವೋ ಎನ್ನುವುದನ್ನು ಕಾಲವೇ ನಿರ್ಣಯಿಸಲಿದೆ” ಎಂದು ಹೇಳುವ ಮೂಲಕ ರಾಜಕೀಯ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಶಾಸಕರು ಮಂತ್ರಿ ಸ್ಥಾನ ಕೇಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, “ರಾಜಕಾರಣದಲ್ಲಿ ಮಂತ್ರಿಯಾಗಬೇಕೆಂದು ಆಸೆ ಪಡುವುದರಲ್ಲಿ ಯಾವುದೇ ತಪ್ಪಿಲ್ಲ. ಸಂಪುಟ ಪುನಾರಚನೆ ಬಗ್ಗೆ ಸಿಎಂ ನೀಡಿದ ಹೇಳಿಕೆಯಿಂದಾಗಿ ಶಾಸಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ” ಎಂದು ಬೆಂಬಲ ಸೂಚಿಸಿದರು.



