March 20, 2026
Friday, March 20, 2026
spot_img

ಜೀವನದಲ್ಲಿ ಸೋತು ಬಸ್‌ಸ್ಟಾಂಡ್‌ನಲ್ಲಿ ಮಗಳನ್ನು ಬಿಟ್ಟು ಹೋದ ತಾಯಿ, ʼಅಕ್ಕʼನಿಂದ ರಕ್ಷಣೆ

ಹೊಸದಿಗಂತ ವರದಿ ಉಡುಪಿ:

ಮನೆಯ ಯಜಮಾನನ್ನು ಕಳೆದುಕೊಂಡರೂ ಮಗಳನ್ನು ಸಾಕಿ ಸಲಹುವ ಆಸೆಯಿಂದ, ಬದುಕುವ ಛಲದಿಂದ ಗೊತ್ತು ಪರಿಚಯ ಇಲ್ಲದ ಊರಿಗೆ ಬಂದ ಮಹಿಳೆಯೊಬ್ಬರು ಜೀವನದ ಹೊಡೆತದ ಮುಂದೆ ಸೋಲೊಪ್ಪಿಕೊಂಡಿದ್ದಾರೆ. ನನ್ನ ಬದುಕು ಮುಗಿಯಿತು, ಮಗಳಿಗಾದರೂ ಒಳ್ಳೆ ಜೀವನ ಸಿಗಲಿ ಎಂದು ತಾಯಿ ಮಗಳನ್ನು ಬಸ್‌ಸ್ಟಾಂಡ್‌ನಲ್ಲಿಯೇ ಬಿಟ್ಟು ಹೋಗಿದ್ದಾರೆ.

ಉಡುಪಿಯ ಬನ್ನಂಜೆ ಬಸ್ ನಿಲ್ದಾಣದಲ್ಲಿ ತನ್ನ ಐದು ವರ್ಷದ ಮಗಳನ್ನು ಬಿಟ್ಟು ತಾಯಿ ಬಡತನಕ್ಕೆ ಶರಣಾಗಿ ಕಾಣದೂರಿಗೆ ಹೋಗಿದ್ದಾರೆ. ಆದರೆ ಸರಿಯಾದ ಸಮಯಕ್ಕೆ ಅಕ್ಕಪಡೆ ಆಗಮಿಸಿದ್ದು, ತಾಯಿ ಮಗಳು ಬೇರಾಗುವುದನ್ನು ತಪ್ಪಿಸಿದೆ.

ತುತ್ತು ಅನ್ನಕ್ಕಾಗಿ ಊರನ್ನೇ ಬಿಟ್ಟರು

ಮಗುವಿನ ತಾಯಿ ಮೂಲತಃ ಗದಗ ಜಿಲ್ಲೆಯವರಾಗಿದ್ದು, ಪತಿಯನ್ನು ಕಳೆದುಕೊಂಡ ಬಳಿಕ ಜೀವನೋಪಾಯಕ್ಕಾಗಿ ಉಡುಪಿಗೆ ವಲಸೆ ಬಂದಿದ್ದರು. ಕೆಲಸ ಸಿಕ್ಕರೂ ತಂಗಲು ಸೂಕ್ತ ವಸತಿಯಿಲ್ಲದೆ, ಈ ತಾಯಿ-ಮಗು ಬನ್ನಂಜೆಯ ಬಸ್ ನಿಲ್ದಾಣವನ್ನೇ ಆಸರೆಯಾಗಿಸಿಕೊಂಡಿದ್ದರು. ಆದರೆ, ಅಪರಿಚಿತ ನಗರದಲ್ಲಿ ಎದುರಾದ ಬದುಕಿನ ಸವಾಲುಗಳನ್ನು ಎದುರಿಸಲಾಗದೆ, ದಿಕ್ಕು ತೋಚದಾದ ತಾಯಿ ಅಂತಿಮವಾಗಿ ತನ್ನ ಕರುಳ ಕುಡಿಯನ್ನು ಬಸ್ ನಿಲ್ದಾಣದಲ್ಲೇ ತ್ಯಜಿಸುವ ಕಠೋರ ನಿರ್ಧಾರಕ್ಕೆ ಬಂದಿದ್ದರು.

ಜೀವನಕ್ಕೊಂದು ಹೊಸ ಭರವಸೆ, ತಲೆಮೇಲೊಂದು ಹೊಸ ಸೂರು

ಬಸ್ ನಿಲ್ದಾಣದಲ್ಲಿ ಐದು ವರ್ಷದ ಹೆಣ್ಣು ಮಗು ಅನಾಥವಾಗಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಲಭಿಸುತ್ತಿದ್ದಂತೆ ಇಲಾಖೆಯ ಸಿಬ್ಬಂದಿ ಕಾರ್ಯಪ್ರವೃತ್ತರಾದರು. ಸರಿಯಾದ ಸಮಯದಲ್ಲಿ ಮಗುವನ್ನು ರಕ್ಷಿಸುವ ಮೂಲಕ ಸಂಭವನೀಯ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಬದುಕಿನಲ್ಲಿ ಸೋತು ಕಣ್ಣೀರು ಹಾಕುತ್ತಿದ್ದ ತಾಯಿಯನ್ನು ಪತ್ತೆಹಚ್ಚಿ, ಇಲಾಖೆಯ ವತಿಯಿಂದ ನೀಡಲಾದ ಸಾಂತ್ವನದ ನುಡಿಗಳು ಹಾಗೂ ಭರವಸೆಯ ಮಾತುಗಳು ಆಕೆಯ ಮೊಗದಲ್ಲಿ ಮತ್ತೆ ಭರವಸೆಯ ನಗೆ ಮೂಡಿಸಿವೆ. ರಕ್ಷಿಸಲ್ಪಟ್ಟ ಮಗುವನ್ನು ದೊಡ್ಡಣಗುಡ್ಡೆಯ ಮಕ್ಕಳ ಕಲ್ಯಾಣ ಸಮಿತಿಯ ಕಚೇರಿಗೆ ಹಾಜರುಪಡಿಸಲಾಯಿತು. ಸಮಿತಿಯ ಆದೇಶದಂತೆ ಸದ್ಯ ಲಕ್ಷ್ಮೀ ನಗರದ ‘ಕೃಷ್ಣಾನುಗ್ರಹ ದತ್ತು ಸ್ವೀಕಾರ ಕೇಂದ್ರ’ದಲ್ಲಿ ಮಗುವಿಗೆ ಸುರಕ್ಷಿತ ಪುನರ್ವಸತಿ ಕಲ್ಪಿಸಲಾಗಿದೆ. ತಾಯಿ-ಮಗು ಇಬ್ಬರೂ ಈಗ ಸುರಕ್ಷಿತವಾಗಿದ್ದು, ಇಲಾಖೆಯ ಮಾನವೀಯ ನಡೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

ಅಕ್ಕಪಡೆಯ ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆ
ಈ ಮಾನವೀಯ ಕಾರ್ಯಾಚರಣೆಯಲ್ಲಿ ಗಸ್ತು ಕರ್ತವ್ಯದಲ್ಲಿದ್ದ ಅಕ್ಕಪಡೆಯ ರಕ್ಷಿತಾ ಮತ್ತು ವನಿತಾ ಅವರು ಪ್ರಮುಖ ಪಾತ್ರ ವಹಿಸಿದ್ದರು. ಇವರಿಗೆ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ನೆರವು ನೀಡಿದರು. ಕಾರ್ಯಾಚರಣೆಯಲ್ಲಿ 112 ತುರ್ತು ಸಹಾಯವಾಣಿ ಕೇಂದ್ರದ ಸಿಬ್ಬಂದಿಗಳು ಹಾಗೂ ಮಕ್ಕಳ ರಕ್ಷಣಾ ಘಟಕದ ಪ್ರಕಾಶ್ ಮತ್ತು ವಿದ್ಯಾಶ್ರೀ ಪಾಲ್ಗೊಂಡಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !