ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟ್ ಪ್ರಿಯರಿಗೆ ಸಂತಸದ ಸುದ್ದಿ ಲಭ್ಯವಾಗಿದೆ. ಆರ್ಸಿಬಿ ತಂಡದ ಪಂದ್ಯ ವೀಕ್ಷಿಸಲು ಬರುವ ಅಭಿಮಾನಿಗಳಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. ಹೌದು! ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯಗಳ ಟಿಕೆಟ್ ಹೊಂದಿರುವವರು ಉಚಿತವಾಗಿ ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡಬಹುದು ಎಂದು ಅಧಿಕೃತ ಮಾಹಿತಿ ಪ್ರಕಟವಾಗಿದೆ.
ಮಾರ್ಚ್ 28ರಂದು ಉದ್ಘಾಟನಾ ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು ಎದುರಿಸಲಿರುವ ಬೆಂಗಳೂರು ತಂಡ, ಏಪ್ರಿಲ್ 5ರಂದು ಚೆನ್ನೈ ವಿರುದ್ಧವೂ ಇದೇ ಮೈದಾನದಲ್ಲಿ ಕಣಕ್ಕಿಳಿಯಲಿದೆ. ಈ ಎರಡೂ ಪಂದ್ಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದೆ.
ಇದನ್ನೂ ಓದಿ:
ಟಿಕೆಟ್ ಪ್ರದರ್ಶಿಸುವ ಮೂಲಕ ಅಭಿಮಾನಿಗಳು ಮೆಟ್ರೋ ಸೇವೆಯನ್ನು ಬಳಸಿಕೊಂಡು ಮೈದಾನಕ್ಕೆ ಸುಲಭವಾಗಿ ಹೋಗಿ ಬರುವ ಅವಕಾಶವನ್ನು ಪಡೆಯಬಹುದು. ಇದರ ಮುಖ್ಯ ಉದ್ದೇಶ ಮೈದಾನದ ಸುತ್ತಮುತ್ತ ಉಂಟಾಗುವ ವಾಹನ ದಟ್ಟಣೆಯನ್ನು ಕಡಿಮೆ ಮಾಡುವುದು ಹಾಗೂ ಸಾರ್ವಜನಿಕ ಸಾರಿಗೆ ಬಳಕೆಯನ್ನು ಉತ್ತೇಜಿಸುವುದಾಗಿದೆ.
ಈ ಯೋಜನೆಯನ್ನು ಜಾರಿಗೆ ತರಲು ಮೆಟ್ರೋ ಸಂಸ್ಥೆಯೊಂದಿಗೆ ತಂಡದ ಆಡಳಿತ ಮಂಡಳಿ ಚರ್ಚೆ ನಡೆಸಿದ್ದು, ಅದು ಯಶಸ್ವಿಯಾಗಿದೆ. ಇದರ ಫಲವಾಗಿ ಪಂದ್ಯ ದಿನಗಳಲ್ಲಿ ಅಭಿಮಾನಿಗಳಿಗೆ ಪ್ರಯಾಣ ಸುಗಮವಾಗಲಿದೆ.



