ಹೊಸದಿಗಂತ ವರದಿ,ಬೆಳಗಾವಿ :
ವಿಕ್ರಮ ವಾರಪತ್ರಿಕೆಯ ಲಾಂಛನದಡಿಯಲ್ಲಿ ನಮ್ಮ ನೆಲದ ಹೆಮ್ಮೆಯ ಪುತ್ರ ಛತ್ರಪತಿ ಶಿವಾಜಿ ಮಹಾರಾಜರ ರೋಮಾಂಚಕ ಹಾಗೂ ಸ್ಫೂರ್ತಿದಾಯಕ ಬದುಕು ಮತ್ತು ಸಾಧನೆಗಳ ಕುರಿತಾಗಿ ಶಕಾವತಾರ ವಿಶೇಷ ಕಾಫಿ ಟೇಬಲ್ ಪುಸ್ತಕ ಕನ್ನಡ ಮತ್ತು ಮರಾಠಿ ಭಾಷೆಯಲ್ಲಿ ಹೊರ ತರಲಾಗಿದ್ದು ಈ ಪುಸ್ತಕವು ಮಾ.21ರಂದು ಸಂಜೆ 5.30 ಗಂಟೆಗೆ ಕೆ.ಎಲ್.ಇ ಯ ಡಾ. ಬಿ.ಎಸ್.ಜಿರಗೆ ಸಭಾವನದಲ್ಲಿ ಬಿಡುಗಡೆ ಆಗಲಿದೆ.
ಈ ಸಮಾರಂಭದಲ್ಲಿ ಬೆಂಗಳೂರಿನ ಗವಿಪುರಂನ ಶ್ರೀ ಗೋಸಾಯಿ ಮಹಾ ಸಂಸ್ಥಾನ ಮಠದ ಪ.ಪೂ ಜಗದ್ಗುರು ವೇದಾಂತಾಚಾರ್ಯ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸುವರು.
ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪುರಸ್ಕೃತ ಮಾಜಿ ರಾಜ್ಯಸಭಾ ಸದಸ್ಯರಾದ ಪ್ರಭಾಕರ ಕೋರೆ ಆಗಮಿಸಲಿದ್ದಾರೆ.
ಪ್ರಧಾನ ಭಾಷಣವನ್ನು ಆರ್‌ಎಸ್‌ಎಸ್ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖರಾದ ಮಂಗೇಶ್ ಭೇಂಡೆ ಮಾಡಲಿದ್ದಾರೆ.
ಆರ್‌ಎಸ್ಎಸ್ ಕರ್ನಾಟಕ ಉತ್ತರದ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಅರವಿಂದರಾವ್ ದೇಶಪಾಂಡೆ ಪ್ರಾಸ್ತಾವಿಕ ನುಡಿ ಆಡುವರು. ಆರ್‌ಎಸ್‌ಎಸ್ ಅಖಿಲ ಭಾರತೀಯ ಸಹ ವ್ಯವಸ್ಥಾ ಪ್ರಮುಖರಾದ ಅನಿಲ್ ಓಕ್ ಪಾಲ್ಗೊಳ್ಳುವರು. ಜ್ಞಾನ ಭಾರತಿ ಪ್ರಕಾಶನ ಲಿಮಿಟೆಡ್‌ನ ನಿರ್ದೇಶಕ ನಿರ್ಮಲ್ ಕುಮಾರ್ ಸುರಾನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಇದು ಸಂಸ್ಥೆಯ ಎಂಟನೇ ಕಾಫಿ ಟೇಬಲ್ ಪುಸ್ತಕ, ಈ ಸರಣಿಯಲ್ಲಿ ಇದುವರೆಗೆ ವಿಜಯನಗರ ಸಾಮ್ರಾಜ್ಯ, ಬಂಜಾರಾ ಸಮುದಾಯ, ಡಾ. ಬಿ ಆರ್ ಅಂಬೇಡ್ಕರ, ಮೈಸೂರು ಒಡೆಯರು, ಮಲೆನಾಡಿನ ಅರಸರ, ಕಿತ್ತೂರು ಕರ್ನಾಟಕ, ಮತ್ತು ಕಲ್ಯಾಣ ಕರ್ನಾಟಕ ಕುರಿತು ವಿಶೇಷ ಪುಸ್ತಕಗಳನ್ನು ಹೊರತರಲಾಗಿದೆ.
ಇದೀಗ ಬರುತ್ತಿರುವ ಛತ್ರಪತಿ ಶಿವಾಜಿ ಮಹಾರಾಜರ ಕುರಿತ ಈ ಪುಸ್ತಕ ನಿಶ್ಚಿತವಾಗಿಯೂ ನಮ್ಮ ಇದುವರೆಗಿನ ಅತ್ಯಂತ ಪ್ರತಿಷ್ಠಿತ ಮತ್ತು ಸಮಗ್ರ ಗ್ರಂಥಗಳಲ್ಲೊಂದು. ಮರಾಠಿ ಭಾಷೆಯಲ್ಲಿ ನಮ್ಮ ಮೊತ್ತ ಮೊದಲ ಪ್ರಯತ್ನ ಕೂಡ. ಕರ್ನಾಟಕ ಮತ್ತು ಮಹಾರಾಷ್ಟ್ರದ ಪ್ರಖ್ಯಾತ ವಿದ್ವಾಂಸರು ಹಾಗೂ ಇತಿಹಾಸ ತಜ್ಞರು ಆಳವಾದ ಅಧ್ಯಯನ ಮತ್ತು ಆಕರ್ಷಕ ಶೈಲಿಯಿಂದ ಬರೆದಿರುವ ಮಹತ್ತರ ಲೇಖನಗಳ ಗುಚ್ಛ ಇದರಲ್ಲಿದೆ. ಕನ್ನಡ ಮತ್ತು ಮರಾಠಿ ಎರಡೂ ಭಾಷೆಗಳಲ್ಲಿ ಲಭ್ಯವಿರುವ ಇದರಲ್ಲಿ ಮಹಾರಾಜರ ಬಗ್ಗೆ ಐತಿಹಾಸಿಕ ಪುರಾವೆಗಳು ಹಾಗೂ ಚಿತ್ತಾಕರ್ಷಕ ಚಿತ್ರಗಳೊಂದಿಗೆ ಕಟ್ಟಿಕೊಡಲಾಗಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಪಿ ಎಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



