ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಬಳ್ಳಾಪುರ ಸಮೀಪದ ದೇವನಹಳ್ಳಿ ಹೊರವಲಯದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮಹಿಳೆಯರು ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಣಿ ಕ್ರಾಸ್ ಬಳಿ ಈ ದುರ್ಘಟನೆ ನಡೆದಿದ್ದು, ಕಾಶಿ ಯಾತ್ರೆಗೆ ತೆರಳುತ್ತಿದ್ದವರ ಪ್ರಯಾಣವೇ ದುರಂತವಾಗಿ ಅಂತ್ಯಗೊಂಡಿದೆ.
ತುಮಕೂರು ಜಿಲ್ಲೆಯ ತಿಪಟೂರು ಮೂಲದ ಮಹಿಳೆಯರ ಗುಂಪೊಂದು ಕಾಶಿ ಪ್ರವಾಸಕ್ಕಾಗಿ ಟಿಟಿ ವಾಹನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಹೊರಟಿತ್ತು. ಬೆಳಗ್ಗೆ ವಿಮಾನ ಹತ್ತುವ ಯೋಜನೆ ಇದ್ದ ಕಾರಣ ಮಧ್ಯರಾತ್ರಿ ಪ್ರಯಾಣ ಆರಂಭಿಸಿದ್ದರು. ಆದರೆ, ರಾಣಿ ಕ್ರಾಸ್ ಸಮೀಪ ಸರ್ವಿಸ್ ರಸ್ತೆಗೆ ತಿರುಗುವಾಗ ಟಿಟಿ ವಾಹನವು ಮುಂಭಾಗದಲ್ಲಿದ್ದ ಓಪನ್ ಟ್ರಕ್ ಲಾರಿಗೆ ಡಿಕ್ಕಿ ಹೊಡೆದಿದೆ.
ಇದನ್ನೂ ಓದಿ:
ಡಿಕ್ಕಿಯ ತೀವ್ರತೆಗೆ ಟಿಟಿ ವಾಹನದ ಎಡಭಾಗ ಸಂಪೂರ್ಣ ಜಖಂಗೊಂಡಿದ್ದು, ಅಲ್ಲಿ ಕುಳಿತಿದ್ದ ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜಯಮ್ಮ (65), ಯಶೋಧಮ್ಮ (60) ಹಾಗೂ ಗಂಗಾ (38) ಮೃತರೆಂದು ಗುರುತಿಸಲಾಗಿದೆ. ಅಪಘಾತದ ವೇಳೆ ವಾಹನದಲ್ಲಿ ಚಾಲಕ ಸೇರಿ ಒಟ್ಟು 13 ಮಂದಿ ಇದ್ದರು.
ಗಾಯಗೊಂಡವರಲ್ಲಿ ನಾಲ್ವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ. ಘಟನೆ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.



