ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಪ್ರೀಂ ಕೋರ್ಟ್ ವಿಚಾರಣೆಯ ಸಂದರ್ಭದಲ್ಲಿ ತಾವು ನೀಡಿದ ಮೌಖಿಕ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ ಮತ್ತು ದೇಶದ ಯುವಕರನ್ನು ದಾರಿ ತಪ್ಪಿಸಲು ದುರುದ್ದೇಶಪೂರ್ವಕವಾಗಿ ಬಳಸಲಾಗಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದ್ದಾರೆ. ಇಂಟರ್ನೆಟ್‌ನಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದ್ದ ʼಕಾಕ್ರಾಚ್ ಜನತಾ ಪಾರ್ಟಿʼ ವಿವಾದದ ನಡುವೆ ಅವರು ಈ ಮಹತ್ವದ ಸ್ಪಷ್ಟನೆ ನೀಡಿದ್ದಾರೆ.
ʼಹೇಳಿಕೆಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆʼ
ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನನ್ನ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ ಮತ್ತು ದುರುಪಯೋಗಪಡಿಸಿಕೊಳ್ಳಲಾಗಿದೆ. ನಾನು ಹೇಳದ ವಿಷಯವನ್ನು ಹೇಳಿದಂತೆ ಬಿಂಬಿಸುತ್ತಿರುವುದು ಅತ್ಯಂತ ದುರದೃಷ್ಟಕರ. ವಿಶೇಷವಾಗಿ, ಇದು ದೇಶದ ಯುವ ಸಮೂಹವನ್ನು ತಪ್ಪು ದಾರಿಗೆಳೆಯುವ ದೊಡ್ಡ ಸಂಚು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾಮಾಜಿಕ ಜಾಲತಾಣಗಳ ಬಗ್ಗೆ ಕಳವಳ
ನ್ಯಾಯಾಲಯದ ಕಲಾಪಗಳ ಸಣ್ಣ ಸಣ್ಣ ವೀಡಿಯೊ ತುಣುಕುಗಳನ್ನು ಯಾವುದೇ ಸರಿಯಾದ ಹಿನ್ನೆಲೆ ಅಥವಾ ಸಂದರ್ಭವನ್ನು ನೀಡದೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವುದರ ಬಗ್ಗೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದರು. ನೀವು ಮಾಧ್ಯಮದಲ್ಲಿ ಇರಬಹುದು ಅಥವಾ ಸಾಮಾನ್ಯ ಪ್ರಜೆಯಾಗಿರಬಹುದು, ನಮ್ಮೆಲ್ಲರಿಗೂ ಹಕ್ಕುಗಳ ಜೊತೆಗೆ ಸಾಂವಿಧಾನಿಕ ಕರ್ತವ್ಯ ಮತ್ತು ಜವಾಬ್ದಾರಿಗಳೂ ಇವೆ. ಸಮಾಜದಲ್ಲಿ ಸೌಹಾರ್ದತೆ ನೆಲೆಸುವಂತೆ ಮಾಡಲು ನಾವೆಲ್ಲರೂ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಅವರು ಕಿವಿಮಾತು ಹೇಳಿದರು.
ಏನಿದು ‘ಜಿರಳೆ’ ಕಮೆಂಟ್ ವಿವಾದ?
ಮೇ 15 ರಂದು ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣವೊಂದರ ವಿಚಾರಣೆ ನಡೆಸುವಾಗ, ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ನಕಲಿ ಪದವಿಗಳನ್ನು ಹೊಂದಿರುವ ಕೆಲವು ವ್ಯಕ್ತಿಗಳನ್ನು ವ್ಯವಸ್ಥೆಯ ಮೇಲೆ ದಾಳಿ ಮಾಡಲು ಸಾಮಾಜಿಕ ಜಾಲತಾಣ ಅಥವಾ ಆರ್‌ಟಿಐ ಕಾರ್ಯಕರ್ತರಾಗುವ ʼಜಿರಳೆಗಳಿಗೆʼ ಹೋಲಿಸಿದ್ದರು. ಈ ಹೇಳಿಕೆಯು ಯುವಕರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ʼಕಾಕ್ರಾಚ್ ಜನತಾ ಪಾರ್ಟಿʼಎಂಬ ವ್ಯಂಗ್ಯಾತ್ಮಕ ಆಂದೋಲನಕ್ಕೆ ಪ್ರೇರಣೆ ನೀಡಿತ್ತು.
ಇದನ್ನೂ ಓದಿ:
ಪ್ರತಿಭಟನೆ ಮತ್ತು ಸಚಿವರ ರಾಜೀನಾಮೆ
ನಂತರ ಈ ಸಿಜೆಪಿ ಸಂಘಟನೆಯು ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ವಿರುದ್ಧ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗಳ ನೇತೃತ್ವ ವಹಿಸಿತ್ತು. ಒಂದು ತಿಂಗಳಿಗೂ ಹೆಚ್ಚು ಕಾಲ ನಡೆದ ಈ ಆಂದೋಲನವು ಜುಲೈ 20 ರಂದು ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಭೀಕರ ಘರ್ಷಣೆಯಲ್ಲಿ ಕೊನೆಗೊಂಡಿತು. ಇದರಲ್ಲಿ ಎರಡೂ ಕಡೆಯ ಹಲವರು ಗಾಯಗೊಂಡಿದ್ದರು. ಈ ದೇಶಾದ್ಯಂತ ಭುಗಿಲೆದ್ದ ಪ್ರತಿಭಟನೆಗಳ ಬೆನ್ನಲ್ಲೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.



