August 30, 2026
Sunday, August 30, 2026
spot_img

ಹೊನ್ನಾವರದಲ್ಲಿ ಮತ್ತೆ ಕಟುಕರ ಅಟ್ಟಹಾಸ: ಗೋವಿನ ರುಂಡ, ಕಾಲು ಬಿಟ್ಟು ಮಾಂಸ ಹೊತ್ತೊಯ್ದ ದುಷ್ಕರ್ಮಿಗಳು

ಹೊಸದಿಗಂತ ಹೊನ್ನಾವರ:

ತಾಲೂಕಿನ ಕಡ್ಲೆ ಗ್ರಾಮದ ವಂದೂರಿನ ಅರಣ್ಯ ವ್ಯಾಪ್ತಿಯಲ್ಲಿ ಅತ್ಯಂತ ಅಮಾನುಷ ಘಟನೆಯೊಂದು ನಡೆದಿದ್ದು, ಮೇಯಲು ಹೋದ ಹಸುವನ್ನು ದುಷ್ಕರ್ಮಿಗಳು ವಧೆ ಮಾಡಿ ಮಾಂಸ ಹೊತ್ತೊಯ್ದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ವಂದೂರು ನಿವಾಸಿ ಗಣಪತಿ ಮಹಾಬಲೇಶ್ವರ ಭಟ್ ಎಂಬುವವರು ತಮ್ಮ ಮನೆಯ 27 ಗೋವುಗಳನ್ನು ಎಂದಿನಂತೆ ರವಿವಾರ ಮುಂಜಾನೆ ಅರಣ್ಯ ಪ್ರದೇಶಕ್ಕೆ ಮೇಯಲು ಬಿಟ್ಟಿದ್ದರು. ಸಂಜೆಯಾದರೂ ಒಂದು ಹಸು ಮನೆಗೆ ಹಿಂದಿರುಗದಿದ್ದಾಗ ಆತಂಕಗೊಂಡ ಮಾಲೀಕರು ಅಕ್ಕಪಕ್ಕದ ಕಾಡಿನಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಸೋಮವಾರ ಮುಂಜಾನೆ ಜಡಿಗದ್ದೆಯ ಅರಣ್ಯ ಇಲಾಖೆಯ ಪ್ರದೇಶದಲ್ಲಿ ಹುಡುಕುತ್ತಿರುವಾಗ, ಅಲ್ಲಿ ಕಂಡುಬಂದ ದೃಶ್ಯ ಗೋಪಾಲಕರನ್ನು ಬೆಚ್ಚಿಬೀಳಿಸಿದೆ.

ದುಷ್ಕರ್ಮಿಗಳು ಹಸುವನ್ನು ಹತ್ಯೆ ಮಾಡಿ, ಅದರ ಮೈ ಮೇಲಿನ ಚರ್ಮ ಹಾಗೂ ಮಾಂಸವನ್ನೆಲ್ಲ ತೆಗೆದುಕೊಂಡು ಹೋಗಿದ್ದಾರೆ. ಹಸುವಿನ ರುಂಡ (ತಲೆ) ಮತ್ತು ಕಾಲುಗಳನ್ನು ಮಾತ್ರ ಅರಣ್ಯದಲ್ಲೇ ಎಸೆದು ಹೋಗುವ ಮೂಲಕ ತಮ್ಮ ವಿಕೃತಿಯನ್ನು ಮೆರೆದಿದ್ದಾರೆ. ಹಸುವಿನ ಅವಶೇಷಗಳನ್ನು ಗುರುತಿಸಿದ ಮಾಲೀಕರು ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಹೊನ್ನಾವರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸಿಪಿಐ ಸಿದ್ದರಾಮೇಶ್ವರ, ಪಿಎಸೈ ಮಹಾಂತೇಶ ವಾಲ್ಮಿಕಿ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಲಾಗಿದೆ.

ಕಳೆದ ಜನವರಿ 2025ರಲ್ಲಿ ಕೊಂಡಾಕುಳಿಯಲ್ಲಿ ಗರ್ಭಿಣಿ ಹಸುವಿನ ಹತ್ಯೆಯಾದ ಕಹಿ ನೆನಪು ಹಸಿರಾಗಿರುವಾಗಲೇ, ಈಗ ಕಡ್ಲೆಯಲ್ಲಿ ಈ ಕೃತ್ಯ ನಡೆದಿರುವುದು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಗೋಪಾಲಕರು ತಮ್ಮ ಜಾನುವಾರುಗಳನ್ನು ಅರಣ್ಯಕ್ಕೆ ಬಿಡಲು ಈಗ ಭಯಪಡುವಂತಾಗಿದ್ದು, ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !