ನೀವು ಬೆಳೆದಿದ್ದೇ ಬೇರೆ ರೀತಿ, ಅವರು ಬೆಳೆದಿದ್ದು ಇನ್ನೊಂದು ರೀತಿ! ನಿಮ್ಮದೊಂದು ಊರು, ಅವರದ್ದು ಮತ್ತೊಂದು ಊರು. ಕಲ್ಚರ್, ಆಚರಣೆ, ಬೆಳೆಯುವಾಗಿನ ಅನುಭವಗಳು ಎಲ್ಲವೂ ಬೇರೆ ಬೇರೆ. ಹೀಗಿರುವಾಗ ಇಂಥ ಎರಡು ವ್ಯಕ್ತಿಗಳು ಮದುವೆ ಎಂಬ ಅಂದದ ಬಾಂಧವ್ಯವನ್ನು ನಿಭಾಯಿಸೋಕೆ ಹೊರಡುತ್ತೀರಿ. ಇದು ಸುಲಭವಲ್ಲ, ಬರೀ ಹೆಣ್ಣಿಗಷ್ಟೇ ಅಲ್ಲ ಗಂಡಿಗೂ ಹೌದು. ಮದುವೆಯಾದ ಹೊಸತರಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿಕೊಂಡು ಕಂಫರ್ಟ್ ನೀಡಲು ಪ್ರಯತ್ನಿಸುತ್ತೀರಿ. ಆದರೆ ಇದು ಹೆಚ್ಚುಕಾಲ ಬಾಳದು. ಇಬ್ಬರೂ ಮಧ್ಯ ಒಂದು ದಾರಿಗೆ ಬಂದು ಕನ್ಸಿಸ್ಟೆನ್ಸಿಯಲ್ಲಿ ಜೀವನ ನಡೆಸಿದಾಗ ಮಾತ್ರ ನಿಮ್ಮ ಸಂಸಾರ ಆನಂದ ಸಾಗರವಾಗಲು ಸಾಧ್ಯ.. ಹೊಂದಾಣಿಕೆ ಸಮಸ್ಯೆ ಬಾರದೇ ಇರಲು ಇಲ್ಲಿದೆ ಐದು ಟಿಪ್ಸ್..
ಮೊದಲಿಗೆ ನಿಮ್ಮ ಆರ್ಥಿಕ ಗುರಿಗಳನ್ನು ಚರ್ಚೆ ಮಾಡಿಕೊಳ್ಳಿ. ಅವಳಿಗಾಗಿ ಇಲ್ಲದ್ದನ್ನು ಇದೆ ಎಂದು ಹೇಳಿ ಆಮೇಲೆ ಸಿಕ್ಕಿಹಾಕಿಕೊಳ್ಳಬೇಡಿ. ಈ ರೀತಿ ಮಾಡೋದ್ರಿಂದ ʼಶುರುನಲ್ಲಿ ಲಕ್ಷ ಸಂಬಳ ಅಂದಿದ್ದೆ ಈಗ ನೋಡಿದ್ರೆ ಎಲ್ಲ ಕಟ್ ಆಗಿ ಕೈಗೆ ಬರೋದು ಅರವತ್ತು ಸಾವಿರ ಅಷ್ಟೆʼ ಎನ್ನುವ ಸಣ್ಣ ಜಗಳಗಳು ಆರಂಭವಾಗುತ್ತವೆ. ಪಾರದರ್ಶಕತೆ ಇರಲಿ.
ಒಂದನ್ನು ನೆನಪಿಡಿ ಮನೆಯಲ್ಲಿ ಗಂಡ ಹೆಂಡತಿ ಇಬ್ಬರೂ ಖುಷಿಯಿಂದ ಇದ್ದರೆ ಮಾತ್ರ ನೆಮ್ಮದಿ ಇರುತ್ತದೆ. ಮನೆ ನೆಮ್ಮದಿಯಿದ್ದರೆ ಕೆಲಸದಲ್ಲೂ ನೆಮ್ಮದಿ ಹೆಚ್ಚು ಹಣ ಗಳಿಸುತ್ತೀರಿ. ಜೀವನ ಚೆನ್ನಾಗಿರುತ್ತದೆ. ಪ್ರತಿಯೊಂದನ್ನು ನಿಮ್ಮ ಪಾರ್ಟ್‌ನರ್ ಜೊತೆ ಚರ್ಚಿಸಿ ನಿರ್ಧರಿಸಿ.
ನಿಮಗೆ ಯಾವುದಾದರೂ ವಿಷಯ ಇಷ್ಟವಾಗುತ್ತಿಲ್ಲ ಎಂದರೆ ತಕ್ಷಣ ಅಲ್ಲದಿದ್ದರೂ ನಿಧಾನಕ್ಕೆ ಕುಳಿತು ಚರ್ಚಿಸಿ. ಮನಸ್ಸಿನಲ್ಲೇ ಇಟ್ಟುಕೊಂಡರೆ ಮನಸ್ಸು ಕಸದಬುಟ್ಟಿಯಾಗುತ್ತದೆ. ಎಂದಾದರು ಒಂದು ದಿನ ಕಸವನ್ನು ಎಸೆಯಲೇಬೇಕಲ್ವಾ?
ನಿಮ್ಮ ಸ್ನೇಹಿತರಿಗೆ ನೀಡುವಷ್ಟು ಗೌರವ ಬೆಲೆ ಅವರ ಸ್ನೇಹಿತರಿಗೂ ನೀಡಿ. ಇಬ್ಬರೂ ಅವರವರ ಸ್ನೇಹಿತರನ್ನು ಮನೆಗೆ ಕರೆಸಿ. ಬಾಂಡಿಂಗ್ ಮಾಡಿಕೊಳ್ಳಿ. ಆಕೆಯ ಸ್ನೇಹಿತರು ಯಾರು ಹೇಗೆ ಎಂದು ನಿಮಗೆ ಗೊತ್ತಿರಲಿ. ಹಾಗೇ ಆತನ ಸ್ನೇಹ ಯಾವ ರೀತಿ, ಸ್ನೇಹಿತರ ಕಣ್ಣಿನಿಂದ ನಿಮ್ಮ ಪತಿಯ ಇನ್ನೊಂದು ವರ್ಷನ್ ತಿಳಿದುಕೊಳ್ಳಿ.
ತಿಂಗಳಿಗೆ ಒಮ್ಮೆಯಾದರೂ ಗಂಡ ಹೆಂಡತಿ ಇಬ್ಬರೇ ಡೇಟ್‌ಗೆ ಹೋಗೋದನ್ನು ರೂಢಿ ಮಾಡಿ. ಇದು ಮುಂದೆ ಮಕ್ಕಳಾದರೂ ಚಾಲ್ತಿಯಲ್ಲಿರಲಿ. ಮಕ್ಕಳಿಗಿಂತ ಮುನ್ನ ನಿಮ್ಮ ಪಾರ್ಟ್‌ನರ್ ಬರಲಿ.



