ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಮೊಗ್ಗ ಜಿಲ್ಲೆಯ ತಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ನೀರಾನೆ ದಾಳಿಯಿಂದಾಗಿ ಮೃತಪಟ್ಟ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಅಥವಾ ಬೇರೆ ಕಡೆ ಸಮೀಕ್ಷಾ ರೆಡ್ಡಿ ಅವರ ಸ್ಮಾರಕ ನಿರ್ಮಿಸಲಾಗುವುದು. ಈಗಾಗಲೇ ಅವರ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದೇವೆ. ಸಮೀಕ್ಷಾ ಅವರು ಕೆಲಸಕ್ಕೆ ಸೇರಿ ಕೆಲವೇ ದಿನಗಳಲ್ಲಿ ಹೀಗಾಗಿದೆ. ಅವರ ಪೋಷಕರಿಗೆ 30 ಲಕ್ಷ ರೂಪಾಯಿ ಪರಿಹಾರ ಕೊಡಲು ಸರ್ಕಾರ ಮುಂದಾಗಿತ್ತು. ಆದರೆ ಅವರು ಹಣ ಬೇಡ ಮಗಳ ಹೆಸರಿನಲ್ಲಿ ಸ್ಮಾರಕ ನಿರ್ಮಿಸಿ ಎಂದು ಮನವಿ ಮಾಡಿದ್ದರು ಎಂದಿದ್ದಾರೆ.
ಯುವ ವೈದ್ಯೆ ಉತ್ಸಾಹಿ ಆಗಿದ್ದರು. ಮೃಗಾಲಯದಲ್ಲಿ ಈ ಹಿಂದೆ ಚಿರತೆಯೊಂದಕ್ಕೆ ಚಿಕಿತ್ಸೆ ನೀಡಿ ಸಂರಕ್ಷಣೆ ಮಾಡಿದ್ದರು. ಘಟನೆ ನಡೆದ ರಾತ್ರಿ ಪಕ್ಷಿಯೊಂದಕ್ಕೆ ಆ್ಯಂಟಿ ಬಯೋಟಿಕ್ಸ್ ನೀಡಲು ಕರ್ತವ್ಯ ನಿರತರಾಗಿ ಹೋಗಿದ್ದರು, ಇಬ್ಬರು ಸಹೋದ್ಯೋಗಿಗಳೂ ಇದ್ದರು. ಪಕ್ಷಿಗೆ ಚಿಕಿತ್ಸೆ ಕೊಟ್ಟ ಬಳಿಕ ಪ್ರತ್ಯೇಕ ಆವರಣದಲ್ಲಿದ್ದ ನೀರಾನೆಯ ಆರೋಗ್ಯ ನೋಡಬೇಕು ಎಂದು ಹೋದಾಗ ಈ ದುರ್ಘಟನೆ ನಡೆದಿದೆ. ವೈದ್ಯೆ ವಿರುದ್ಧ ನಮ್ಮ ಅಧಿಕಾರಿಗಳು ಯಾರಾದರೂ ತಪ್ಪು ಹೇಳಿಕೆ ನೀಡಿದ್ದರೆ, ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅರಣ್ಯ ಸಚಿವರು ಸ್ಪಷ್ಟಪಡಿಸಿದರು.



